ಕಾರು ಅಡ್ಡಗಟ್ಟಿ ಲಕ್ಷಾಂತರ ರೂ ಮೌಲ್ಯದ ವಸ್ತುಗಳನ್ನು ದೋಚಿದ್ದ ನಾಲ್ವರು ಅರೆಸ್ಟ್

ಕಾರು ಅಡ್ಡಗಟ್ಟಿ 3.50 ಲಕ್ಷ ರೂ. ಮೌಲ್ಯದ ತಾಮ್ರ ಮತ್ತು ಹಿತ್ತಾಳೆಯ ಗುಜರಿ ವಸ್ತುಗಳನ್ನು ದರೋಡೆ ಮಾಡಿದ್ದ ಆರೋಪಿಗಳನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪೊಲೀಸರು ಬಂಧಿಸಿದ್ದಾರೆ.
ಇವರಿಂದ ಗುಜರಿ ವಸ್ತುಗಳು ಸೇರಿ ಒಟ್ಟು 7.35 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಭದ್ರಾವತಿ ಹೊಸಮನೆಯ ಭೋವಿ ಕಾಲೋನಿಯ ಕವಿರಾಜ್ (21), ಶಿವಮೊಗ್ಗದ ಮೇಲಿನ ತುಂಗಾನಗರದ ಮುಬಾರಕ್ (24), ಭದ್ರಾವತಿ ಬಾರಂದೂರಿನ ಅಜಿತ್ ಅಲಿಯಾಸ್ ಘಟ್ಟ (19), ಕಬಳಿಕಟ್ಟೆಯ ಮಂಜುನಾಥ್ ಅಲಿಯಾಸ್ ಮಂಜು (21) ಬಂಧಿತರು.
ಶಿವಮೊಗ್ಗದ ಆರ್.ಎಂ.ಎಲ್ ನಗರದ ಕಾರ್ತಿಕ್ ಓಮ್ನಿ ಕಾರಿನಲ್ಲಿ 3.50 ಲಕ್ಷ ರೂ. ಮೌಲ್ಯದ ಹಿತ್ತಾಳೆ ಮತ್ತು ತಾಮ್ರದ ಗುಜರಿ ವಸ್ತುಗಳನ್ನು ಕೊಂಡೊಯ್ಯುತ್ತಿದ್ದರು. ಮಾರ್ಚ್ 25ರಂದು ಬೆಳಗ್ಗೆ 6.30ರ ಹೊತ್ತಿಗೆ ಭದ್ರಾವತಿಯ ರಾಮಿನಕೊಪ್ಪದಲ್ಲಿ ಓಮ್ನಿ ಕಾರನ್ನು ಅಡ್ಡಗಟ್ಟಿದ ನಾಲ್ವರು, ಗುಜರಿ ವಸ್ತುಗಳನ್ನು ದರೋಡೆ ಮಾಡಿದ್ದರು. ಈ ಸಂಬಂಧ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. 700 ಕೆ.ಜಿ ತೂಕದ ಹಿತ್ತಾಳೆ ಮತ್ತು ತಾಮ್ರದ ಗುಜರಿ ವಸ್ತುಗಳು, ಕೃತ್ಯಕ್ಕೆ ಬಳಸಿದ ಟಾಟಾ ಏಸ್ ವಾಹನ, ಒಂದು ಪಲ್ಸರ್ ಬೈಕ್ ವಶಕ್ಕೆ ಪಡೆದಿದ್ದಾರೆ. ಭದ್ರಾವತಿ ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಜಗದೀಶ ಹಂಚಿನಾಳ್ ನೇತೃತ್ವದ ತಂಡ ಆರೋಪಿಗಳನ್ನ ಬಂಧಿಸಿದೆ.