ಪೊಲೀಸರ ಎಡವಟ್ಟು: ತಪ್ಪೇ ಮಾಡದ ವ್ಯಕ್ತಿಗೆ ಎರಡು ವರ್ಷ ಜೈಲು ಶಿಕ್ಷೆ!

ಪೊಲೀಸರ ಎಡವಟ್ಟು: ತಪ್ಪೇ ಮಾಡದ ವ್ಯಕ್ತಿಗೆ ಎರಡು ವರ್ಷ ಜೈಲು ಶಿಕ್ಷೆ!

ಕೊಲೆಯಾಗಿದ್ದಾಳೆ ಎಂದುಕೊಳ್ಳಲಾಗಿದ್ದ ಮಹಿಳೆ ಪ್ರಿಯಕರನೊಂದಿಗೆ ಪತ್ತೆ

ಮೈಸೂರು – ಪತ್ನಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಪತಿಯು ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿರುವಾಗಲೇ, ಆಕೆ ತನ್ನ ಪ್ರಿಯಕರನೊಂದಿಗೆ ಪತ್ತೆಯಾಗಿದ್ದಾರೆ. ಪ್ರಕರಣದಲ್ಲಿ ಎರಡು ವರ್ಷ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿದ್ದ ಪತಿಯು ಈಚೆಗಷ್ಟೇ ಜಾಮೀನು ಪಡೆದು ಬಿಡುಗಡೆಗೊಂಡಿದ್ದರು.

ನಾಲ್ಕು ವರ್ಷದ ಹಿಂದೆ ಕೊಲೆಯಾಗಿದ್ದಾರೆ ಎಂದು ಸುದ್ದಿಯಾಗಿದ್ದ ಮಹಿಳೆ ಮಲ್ಲಿಗೆ, ಪ್ರಿಯಕರ ಗಣೇಶ್‌ನೊಂದಿಗೆ ಪತ್ತೆಯಾಗಿದ್ದು, ಜಿಲ್ಲಾ ಸೆಷನ್ಸ್‌ ನ್ಯಾಯಾಲವು ಪ್ರಕರಣದ ಕುರಿತು 15 ದಿನಗಳೊಳಗೆ ವಿವರಣೆ ನೀಡುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚಿಸಿದೆ.

ವಿವರ: ‘2021ರ ಜುಲೈನಲ್ಲಿ ಕುಶಾಲನಗರದ ಬಸವನಹಳ್ಳಿ ಹೊಸ ಬಡಾವಣೆಯ ನಿವಾಸಿ ಮಲ್ಲಿಗೆ ಕಾಣೆಯಾಗಿದ್ದಾರೆಂದು ಪ್ರಕರಣ ದಾಖಲಾಗಿತ್ತು. ಅದೇ ತಿಂಗಳ 18ರಂದು ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಠಾಣಾ ವ್ಯಾಪ್ತಿಯ ಶಾನುಭೋಗನಹಳ್ಳಿಯ ಕಾಲುವೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ಅದು ಮಗಳದ್ದೇ ಎಂದು ಮಲ್ಲಿಗೆಯ ತಾಯಿ ಗುರುತಿಸಿದ್ದರು. ಪತಿ ಸುರೇಶ್‌ ಅವರನ್ನು ವಿಚಾರಣೆ ನಡೆಸಿದ ಪೊಲೀಸರು, ಆತ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿರುವುದಾಗಿ ತಿಳಿಸಿ, ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು’ ಎಂದು ಮೂಲಗಳು ತಿಳಿಸಿವೆ.

ಮಹಿಳೆಯು ಏ.1ರಂದು ಕುಶಾಲನಗರದ ಹೋಟೆಲ್‌ ಒಂದರಲ್ಲಿರುವುದರ ಬಗ್ಗೆ ಸ್ನೇಹಿತರು ನೀಡಿದ ಮಾಹಿತಿಯನ್ನು ಸುರೇಶ್‌ ಪೊಲೀಸರ ಗಮನಕ್ಕೆ ತಂದಿದ್ದರು. ಪ್ರಿಯಕರ ಗಣೇಶ್‌ ಜೊತೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ದೇವಾಲಯಕ್ಕೆ ತೆರಳುತ್ತಿರುವಾಗ ಮಡಿಕೇರಿ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು, ಕುಶಾಲನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.

ಅವಸರದ ವರದಿ:

‘ಮೃತದೇಹದ ಹಾಗೂ ಮಲ್ಲಿಗೆ ಅವರ ತಾಯಿಯ ರಕ್ತದ ಡಿಎನ್‌ಎ ಪರೀಕ್ಷೆಯ ವರದಿ ಬರುವ ಮುನ್ನವೇ ಪೊಲೀಸರು ನ್ಯಾಯಾಲಯಕ್ಕೆ ಅಂತಿಮ ವರದಿ ನೀಡಿದ್ದರು. ಹೈಕೋರ್ಟ್‌ಗೆ ಈ ಬಗ್ಗೆ ಅರ್ಜಿ ಸಲ್ಲಿಸಿದಾಗ ಡಿಎನ್‌ಎ ಹೊಂದಾಣಿಕೆಯಿಲ್ಲ ಎಂಬುದು ತಿಳಿಯಿತು. ಮಡಿಕೇರಿಯಲ್ಲಿ ಮಲ್ಲಿಗೆ ಹಾಗೂ ಗಣೇಶ್‌ನನ್ನು ವಶಕ್ಕೆ ಪಡೆದ ನಂತರ ನಾವು ತೆರಳಿದಾಗ ಪೊಲೀಸರು ಆಕೆಯನ್ನು ನಮಗೆ ತೋರಿಸಲಿಲ್ಲ’ ಎಂದು ಸುರೇಶ್‌ ಪರ ವಕೀಲ ಪಾಂಡು ತಿಳಿಸಿದರು.

‘ಪ್ರಕರಣ ಮುಚ್ಚಿ ಹಾಕುತ್ತಾರೆಂಬ ಭಯದಿಂದ ನ್ಯಾಯಾಧೀಶರ ಮೂಲಕ ಆಕೆ ಯಾರು ಎಂಬ ಮಾಹಿತಿ ಪಡೆದೆ. ನ್ಯಾಯಾಲಯವು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ. ಮಹಿಳೆಯು ಮಡಿಕೇರಿಯಿಂದ ಸುಮಾರು 24 ಕಿ.ಮೀ ದೂರದಲ್ಲಿರುವ ಶೆಟ್ಟಿಹಳ್ಳಿಯಲ್ಲಿ ವಾಸವಿದ್ದಾರೆ. ಆದರೂ ಆಕೆಯ ಪತ್ತೆಗೆ ಪೊಲೀಸರು ಕ್ರಮ ವಹಿಸದಿರುವುದು ವಿಷಾದನೀಯ’ ಎಂದರು.

Leave a Reply

Your email address will not be published. Required fields are marked *