ಊಟದ ಬಿಲ್ ಕೇಳಿದ್ದಕ್ಕೆ ಹೊಟೇಲ್ ಮಾಲೀಕನಿಗೆ ಚಾಕುವಿನಿಂದ ಇರಿತ
ಶಿವಮೊಗ್ಗ: ಮಟನ್ ಊಟದ ಬಿಲ್ ಕೇಳಿದ್ದಕ್ಕೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇಲ್ಲಿನ ರಾಗಿಗುಡ್ಡದ ಸಮೀಪ ನೆಕ್ಸಾ ಸರ್ವಿಸ್ ಸೆಂಟರ್ ಬಳಿ ಇರುವ ಫಾಸ್ಟ್ ಪುಡ್ ಸೆಂಟರ್‌ವೊಂದರಲ್ಲಿ ಈ ಘಟನೆ ನಡೆದಿದೆ.
ಸೋಮವಾರ ಫಾಸ್ಟ್‌ಪುಡ್ ಮಾಲೀಕ ಎಂದಿನಂತೆ ವ್ಯಾಪಾರ ಮಾಡುತ್ತಿದ್ದರು. ಮಧ್ಯಾಹ್ನ 2.30 ರ ಹೊತ್ತಿಗೆ ಅಲ್ಲಿಗೆ ಬಂದ ಗೋಂದಿ ಚಟ್ನಳ್ಳಿಯ ನಿವಾಸಿ ಪರಮೇಶ್ ಎಂಬಾತ ಮುದ್ದೆ ಹಾಗೂ ತಲೆ ಮಟನ್ ಪಡೆದು ಊಟ ಮಾಡಿದ್ದಾರೆ. ಬಳಿಕ ಬಿಲ್ ಕೊಡದೆ ಹಾಗೆ ಎದ್ದು ಹೊರಟಾಗ ಅಂಗಡಿಯ ಮಾಲೀಕ ಬಿಲ್ ಕೊಡುವಂತೆ ಕೇಳಿದ್ದಾರೆ. ಈ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ತನ್ನ ಜೇಬಿನಲ್ಲಿದ್ದ ಚಾಕುವನ್ನು ತೆಗೆದ ಪರಮೇಶ್ ಅಂಗಡಿಯ ಮಾಲೀಕನ ಕತ್ತಿನ ಬಳಿ ಬೀಸಿದ್ದ. ಪರಿಣಾಮ ಅಂಗಡಿ ಮಾಲೀಕನ ಕತ್ತಿನ ಬಳಿಯಲ್ಲಿ ಗಾಯವಾಗಿ, ಅವರು ಕುಸಿದು ಬಿದ್ದಿದ್ದಾರೆ. ಅಲ್ಲಿದ್ದ ಉಳಿದವರು ಆರೋಪಿ ಕೈಯಿಂದ ಚಾಕು ಕಿತ್ತುಕೊಂಡು, ಜಗಳ ತಪ್ಪಿಸಿದ್ದಾರೆ. ಇನ್ನೂ ಘಟನೆ ಬೆನ್ನಲ್ಲೆ ಆರೋಪಿ ಸ್ಥಳದಿಂದ ಪರಾರಿ ಆಗಿದ್ದಾನೆ.
ಈ ಸಂಬಂಧ ಮೆಗ್ಗಾನ್ ನಲ್ಲಿ ಚಿಕಿತ್ಸೆ ಪಡದು ಅಂಗಡಿ ಮಾಲೀಕ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.