ಶಿವಮೊಗ್ಗಕ್ಕೆ ಲಗ್ಗೆ ಇಟ್ಟ ರ‍್ಯಾಪಿಡೋ ಬೈಕ್ ಟ್ಯಾಕ್ಸಿ, ಆಟೋ ಚಾಲಕರ ಆಕ್ರೋಶ
ಶಿವಮೊಗ್ಗ : ಬೆಂಗಳೂರಿನ ಬಳಿಕ ರ‍್ಯಾಪಿಡೋ ಬೈಕ್ ಟ್ಯಾಕ್ಸಿಗಳು ರಾಜ್ಯದ ವಿವಿಧ ನಗರಗಳಿಗೆ ತನ್ನ ಜಾಲ ವಿಸ್ತರಿಸಿದೆ. ಶಿವಮೊಗ್ಗ ಸಿಟಿಯಲ್ಲಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿಗಳ ಸಂಚಾರ ಶುರುವಾಗಿದೆ. ಇದು ಆಟೋ ಚಾಲಕರ ಪಾಲಿಗೆ ನುಂಗಲಾರದ ತುತ್ತಾಗಿದೆ.
ಏನಿದು ರ‍್ಯಾಪಿಡೋ ಬೈಕ್ ಟ್ಯಾಕ್ಸಿ?
ಕಾರು ಟ್ಯಾಕ್ಸಿ ಮಾದರಿಯಲ್ಲಿಯೇ ಬೈಕ್ ಟ್ಯಾಕ್ಸಿ ಸೇವೆ ಒದಗಿಸುವ ಸಂಸ್ಥೆಯೇ ರ‍್ಯಾಪಿಡೋ. ಬೆಂಗಳೂರು ಮೂಲದ ಈ ಸಂಸ್ಥೆ ದೇಶದ ನಾನಾ ಭಾಗದಲ್ಲಿ ಬೈಕ್ ಟ್ಯಾಕ್ಸಿ ಸೇವೆ ಹೊಂದಿದೆ. ಬೈಕ್ ಇರುವವರು ರ‍್ಯಾಪಿಡೋ ಜೊತೆ ಒಪ್ಪಂದ ಮಾಡಿಕೊಂಡು ಈ ಟ್ಯಾಕ್ಸಿ ಸೇವೆ ನೀಡಬಹುದು. ಪ್ರಯಾಣಿಕರು ಮೊಬೈಲ್ ಆ್ಯಪ್‌ನಲ್ಲಿ ಬೈಕ್ ಟ್ಯಾಕ್ಸಿ ಬುಕ್ ಮಾಡಬಹುದು. ಕೆಲವೇ ಹೊತ್ತಿಗೆ ಬೈಕ್ ಟ್ಯಾಕ್ಸಿ ಪ್ರಯಾಣಿಕ ನಿಗದಿಪಡಿಸಿದ ಸ್ಥಳಕ್ಕೆ ಬಂದು ನಿಲ್ಲುತ್ತದೆ. ನಗರ ವ್ಯಾಪ್ತಿಯಲ್ಲಿ ಯಾವುದೇ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬೈಕ್ ಟ್ಯಾಕ್ಸಿಯಲ್ಲಿ ಸುಲಭಕ್ಕೆ ತೆರಳಬಹುದಾಗಿದೆ.
ಕಿಲೋ ಮೀಟರ್‌ಗೆ ಇಂತಿಷ್ಟು ಎಂದು ನಿಗದಿಯಾದ ದರವನ್ನು ಪ್ರಯಾಣಿಕ ಪಾವತಿಸಬೇಕು. ಇದರಲ್ಲಿ ರ‍್ಯಾಪಿಡೋ ಸಂಸ್ಥೆಗು ಕಮಿಷನ್ ಸಲ್ಲಲಿದೆ. ಬೈಕ್ ಚಾಲಕನಿಗೆ ಬಾಡಿಗೆ ಹಣ ಸಿಗಲಿದೆ. ಬೆಂಗಳೂರು ಸೇರಿದಂತೆ ವಿವಿಧೆಡೆ ರ‍್ಯಾಪಿಡೋ ಆಟೋ, ಕಾರು ಟ್ಯಾಕ್ಸಿ ಸರ್ವಿಸ್ ಕೂಡ ನೀಡುತ್ತಿದೆ.
ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ರ‍್ಯಾಪಿಡೋ ಬೈಕ್ ಟ್ಯಾಕ್ಸಿ, ಈಗ ಶಿವಮೊಗ್ಗದಲ್ಲಿಯು ಸರ್ವಿಸ್ ಶುರು ಮಾಡಿದೆ. ಈಗಾಗಲೇ ಹಲವು ಬೈಕ್ ಸವಾರರು ರ‍್ಯಾಪಿಡೋಗೆ ನೋಂದಣಿ ಮಾಡಿಕೊಂಡಿದ್ದಾರೆ. ಬೈಕ್ ಟ್ಯಾಕ್ಸಿಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದಾರೆ.
‘ಪ್ರಸ್ತುತ ನಾಲ್ಕು ಕಿ.ಮೀ.ವರೆಗಿನ ಪ್ರಯಾಣಕ್ಕೆ 20 ರೂ., ನಾಲ್ಕು ಕಿ.ಮೀ ನಂತರದ ಪ್ರಯಾಣಕ್ಕೆ 30 ರೂ. ದರ ವಿಧಿಸಲಾಗುತ್ತಿದೆʼ ಅನ್ನುತ್ತಾರೆ ರ‍್ಯಾಪಿಡೋ ಬೈಕ್ ಟ್ಯಾಕ್ಸಿಯೊಂದರ ಚಾಲಕ.
ರ‍್ಯಾಪಿಡೋ ಬೈಕ್ ಟ್ಯಾಕ್ಸಿಯಿಂದಾಗಿ ಆಟೋ ಚಾಲಕರು ಆತಂಕಕ್ಕೀಡಾಗಿದ್ದಾರೆ. ದಿನಕ್ಕೆ ಸಿಗುತ್ತಿದ್ದ ಒಂದೆರಡು ಬಾಡಿಗೆಯನ್ನೂ ಬೈಕ್ ಟ್ಯಾಕ್ಸಿಗಳು ಕಸಿಯಬಹುದು ಎಂದು ಚಿಂತೆಗೀಡಾಗಿದ್ದಾರೆ. ಶಿವಮೊಗ್ಗದಲ್ಲಿ ಸುಮಾರು ಆರು ಸಾವಿರ ಆಟೋಗಳಿವೆ. ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಆಟೋಗಳ ಮೇಲೆ ಅವಲಂಬಿತವಾಗಿದ್ದಾರೆ.
ಶಿವಮೊಗ್ಗದಲ್ಲಿ ಸದ್ದಿಲ್ಲದೆ ರ‍್ಯಾಪಿಡೋ ಸೇವೆ ಆರಂಭವಾಗಿದ್ದರು, ಸಾರ್ವಜನಿಕರು ಇದರ ಉಪಯೋಗ ಪಡೆಯಲು ಆರಂಭಿಸಿದ್ದಾರೆ. ಹಾಗಾಗಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ರ‍್ಯಾಪಿಡೋ ಬೈಕ್ ಟ್ಯಾಕ್ಸಿಗಳಲ್ಲಿ ತೆರಳುವಾಗ ಅಪಘಾತ ಸಂಭವಿಸಿದರೆ ಹೊಣೆ ಯಾರು? ಇನ್ಷುರೆನ್ಸ್ ಕ್ಲೇಮ್ ಆಗಲಿದೆಯೇ ಅನ್ನುವುದು ಆಟೋ ಚಾಲಕರ ಪ್ರಶ್ನೆ. ಇತ್ತ ನಿರುದ್ಯೋಗಿ ಯುವಕರಿಗೆ, ಬೈಕ್ ಇದ್ದು ಪಾರ್ಟ್ ಟೈಮ್ ಉದ್ಯೋಗ ಮಾಡ ಬಯಸುವವರಿಗೆ ರ‍್ಯಾಪಿಡೋ ಉತ್ತಮ ವೇದಿಕೆ ಎಂಬ ವಾದವು ಇದೆ. ಹಾಗಾಗಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಪರ ಮತ್ತು ವಿರುದ್ಧ ಚರ್ಚೆಗಳಿವೆ. ಆದರೆ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆ ಆಟೋ ಚಾಲಕರು ಮತ್ತು ಅವಲಂಬಿತ ವರ್ಗಕ್ಕೆ ದೊಡ್ಡ ಪೆಟ್ಟು ನೀಡಲಿದೆ.
ಸರ್ಕಾರವೆ ಆಟೋಗಳಿಗೆ ಪ್ರತ್ಯೇಕ ಆ್ಯಪ್ ಸಿದ್ಧಪಡಿಸಬೇಕು. ಇದರಿಂದ ಆಟೋ ಚಾಲಕರಿಗೆ ಅನುಕೂಲವಾಗಲಿದೆ. ಅಲ್ಲದೆ ಖಾಸಗಿ ವಾಹನದಲ್ಲಿ ಬಾಡಿಗೆಗೆ ಅನುಮತಿ ನೀಡಬಾರದು ಎಂಬ ಆಗ್ರಹವಿದೆ.