ಬೈಕ್ ಸವಾರನ ಮೇಲೆರಗಿದ ಹುಲಿ – ಗಾಯಾಳು ಆಸ್ಪತ್ರೆಗೆ ದಾಖಲು
ಶಿವಮೊಗ್ಗ: ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಹುಲಿ ದಾಳಿ ನಡೆಸಿರುವ ಬಗ್ಗೆ ಮಾಹಿತಿಯೊಂದು ಲಭ್ಯವಾಗಿದೆ.
ಈ ಘಟನೆ ಮುತ್ತಿನಕೊಪ್ಪದ ಮುಂದೆ ಸಿಗುವ ತೋಟದ ಕೆರೆ ಬಳಿ ನಿನ್ನೆ ರಾತ್ರಿ ಏಳು ಮೂವತ್ತರ ಹೊತ್ತಿಗೆ ನಡೆದಿದೆ. ಘಟನೆಯಲ್ಲಿ ಶಶಿಧರ್ ಎಂಬವರು ಗಾಯಗೊಂಡಿದ್ದು, ಅವರನ್ನ ಸ್ಥಳೀಯ ಹಳ್ಳಿಯವರು ಉಪಚರಿಸಿದ್ದಾರೆ. ಆ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಶಶಿಧರ್ ಎಂಬವರು ನಿನ್ನೆ ದಾವಣಗೆರೆಗೆ ಹೋಗಿ ಕೆಲಸ ಮುಗಿಸಿ, ಇನ್ನೊಂದು ಕೆಲಸಕ್ಕೆ ಹೋಗುತ್ತಿದ್ದರು. ಈ ವೇಳೆ ತೋಟದ ಕೆರೆ ಸಮೀಪ ಬೈಕ್‌ನಲ್ಲಿ ಹೋಗುತ್ತಿದ್ದ ಶಶಿಧರ್ ರವರಿಗೆ ಅಡ್ಡಲಾಗಿ ಹುಲಿಯೊಂದು ಬೈಕ್‌ನ ಮೇಲೆ ಹಾರಿದ ಅನುಭವ ಆಗಿದೆ. ಮಿಂಚಿನಂತೆ ನಡೆದ ಘಟನೆಯಲ್ಲಿ ಬೈಕ್‌ನಿಂದ ಶಶಿಧರ್ ಕೆಳಕ್ಕೆ ಬಿದ್ದಿದ್ದಾರೆ. ಇದೇ ವೇಳೆ ಅಲ್ಲಿಗೆ ಅಯ್ಯಪ್ಪಸ್ವಾಮಿ ಭಕ್ತರಿದ್ದ ಟಿಟಿಯೊಂದು ಬಂದಿದೆ. ಹೀಗಾಗಿ ಅದರ ಬೆಳಕಿಗೆ ವನ್ಯಜೀವಿ ಕಾಡಿನತ್ತ ಓಡಿದೆ.
ಈ ಸಂಬಂಧ ಮಾತನಾಡಿರುವ ಅವರು, ಕಾಡಿನ ದಾರಿಯಲ್ಲಿ ಹೋಗುತ್ತಿದ್ದ ವೇಳೆ ತುಸು ಭಯವಿರುತ್ತೆ. ಹಾಗಾಗಿ ಸ್ವಲ್ಪ ಸ್ಪೀಡಾಗಿ ಹೋಗುತ್ತಿದ್ದೆ. ಈ ವೇಳೆ ಅಲ್ಲಿಯೇ ಟ್ರಂಚ್‌ವೊಂದರ ಬಳಿ ಹುಲಿಯ ರೀತಿಯ ಪ್ರಾಣಿಯೊಂದು ಕಾಣಿಸಿತು. ಆದರೆ ವೇಗವಾಗಿದ್ದರಿಂದ ಅದರ ಬಗ್ಗೆ ಗಮನಕೊಡಲಿಲ್ಲ. ಅಷ್ಟೊತ್ತಿಗೆ ಸ್ಪೀಡ್‌ನಲ್ಲಿ ಹಾರಿದ ಪ್ರಾಣಿ ಸೀದಾ ತಮ್ಮ ಬೈಕ್‌ನ ಬಂಪರ್ ಮೇಲೆ ಬಿದ್ದಿದೆ. ನಾನು ಆಯತಪ್ಪಿ ಅಲ್ಲಿಯೇ ಬಿದ್ದೆ. ಅಲ್ಲದೆ ಭಯದಿಂದ ಮೇಲಕ್ಕೆ ಏಳಲು ಸಹ ಸಾಧ್ಯವಾಗಲಿಲ್ಲ. ಮೇಲಾಗಿ ವನ್ಯಜೀವಿ ಮತ್ತೆ ಅಟ್ಯಾಕ್ ಮಾಡುವ ಆತಂಕ ಕಾಡಿತ್ತು. ಅಷ್ಟೊತ್ತಿಗೆ ಅಲ್ಲಿಗೆ ಟಿಟಿಯೊಂದು ಬಂದಿದೆ. ಅದರ ಬೆಳಕಿಗೆ ಪ್ರಾಣಿ ಕಾಡಿನತ್ತ ಓಡಿದಂತೆ ಕಾಣಿತು. ಆನಂತರ ಮುತ್ತಿನಕೊಪ್ಪದ ಯುವಕನೊಬ್ಬ ತಮ್ಮ ಸ್ಥಿತಿ ಕಂಡು ನೀರು ಕೊಟ್ಟು ಉಪಚರಿಸಿದ್ದಾರೆ. ಆನಂತರ ಅಲ್ಲಿಯೇ ಹತ್ತಿರ ಇರುವ ಹಳ್ಳಿಗೆ ಕರೆದುಕೊಂಡು ಹೋದರು. ಅಲ್ಲಿನ ಜನರು ತಮ್ಮನ್ನು ಉಪಚರಿಸಿದರು.
ಈ ವೇಳೆ ಅಲ್ಲಿನ ಹಳ್ಳಿಯ ಜನರ ಪೈಕಿ ಈ ಭಾಗದ ಕೆರೆಯೊಂದರ ಬಳಿ ಹುಲಿಯಿದ್ದು, ಅದರ ಘರ್ಜನೆ ಕೇಳಿದ್ದಾಗಿ ಹೇಳಿದರು. ಆದರೆ ಮತ್ತೆ ಕೆಲವರು ತಮ್ಮ ಮೇಲೆ ದಾಳಿ ನಡೆಸಿದ್ದು ಹುಲಿಯಲ್ಲ ಚಿರತೆ ಎಂದು ಹೇಳಿದ್ದಾರೆ. ಆದರೆ ನನ್ನ ಕಣ್ಣಿಗೆ ದಾಳಿ ಮಾಡಿದ ಪ್ರಾಣಿ ಹುಲಿಯಂತೆ ಕಂಡಿದೆ. ಗಾಬರಿಯಲ್ಲಿ ಪೂರ್ಣ ರೀತಿಯಲ್ಲಿ ಜಡ್ಜ್ ಮಾಡಲು ಸಾಧ್ಯವಾಗಲಿಲ್ಲ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸುಧಾರಿಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.