ಆರು ವರ್ಷಗಳಿಂದ ವಿಚ್ಚೇದನಕ್ಕೆ ಯತ್ನಿಸುತಿದ್ದ ಸೊರಬದ ದಂಪತಿಗಳಿಗಳನ್ನು ಒಂದೂಗೂಡಿಸಿದ ಉಡುಪಿ ನ್ಯಾಯಾಲಯ
ಉಡುಪಿ : ಕಳೆದ ಆರು ವರ್ಷಗಳಿಂದ ಪ್ರತ್ಯೇಕವಾಗಿದ್ದ ದಂಪತಿಗಳನ್ನು ಉಡುಪಿಯ ಕೌಟುಂಬಿಕ ನ್ಯಾಯಾಲಯ ಒಂದುಗೂಡಿಸಿ ಪರಸ್ಪರ ಮಾಲಾರ್ಪಣೆ ಮಾಡಿಸಿ ಸಿಹಿ ಹಂಚಿ ಸಂಭ್ರಮಿಸಿದ ಕ್ಷಣ ಶನಿವಾರ ನಡೆದ ರಾಷ್ಟ್ರಿಯ ಲೋಕ ಅದಾಲತ್‍ನಲ್ಲಿ ಸಾಕ್ಷಿಯಾಯಿತು.
ಪ್ರಕರಣದ ಹಿನ್ನಲೆ:
ಸೊರಬದ ರಾಘವೇಂದ್ರ ಆಚಾರ್ಯರವರು ಮಂದಾರ್ತಿ ಮುದ್ದುಮನೆಯ ಮಾಲತಿಯವರೊಂದಿಗೆ 2018 ನೇ ಏಪ್ರಿಲ್‍ನಲ್ಲಿ ಯಡ್ತಾಡಿಯ ಚಾಮುಂಡೇಶ್ವರಿ ಸಭಾ ಭವನದಲ್ಲಿ ವಿವಾಹ ಆಗಿದ್ದರು. ಮದುವೆ ಆದ ಸ್ವಲ್ಪ ಸಮಯದ ನಂತರ ಮಾಲತಿ ಗಂಡನ ಮನೆಯಿಂದ ತನ್ನ ತವರು ಮನೆಗೆ ಬಂದು ಸೇರಿದ್ದರು. ಮತ್ತು ಈ ದಂಪತಿಗಳಿಗೆ ಗಂಡು ಮಗು ಸಹ ಇದ್ದು ಪರಸ್ಪರ ಭಿನ್ನಾಭಿಪ್ರಾಯದಿಂದ ಮಾಲತಿ ತನ್ನ ಗಂಡನ ಮನೆಗೆ ಹೋಗಲು ಒಪ್ಪುತ್ತಿರಲಿಲ್ಲ. ಗಂಡ ರಾಘವೇಂದ್ರ ತನಗೆ ಹೆಂಡತಿ ಬೇಕೆಂದು ಸೊರಬದ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಲಯದಲ್ಲಿ ಅರ್ಜಿಯನ್ನು ದಾಖಲಿಸಿ ಐತೀರ್ಪನ್ನು ಪಡೆದುಕೊಂಡಿದ್ದರು.
ನ್ಯಾಯಾಲಯದ ಆದೇಶದಂತೆ ಪತ್ನಿ ಮಾಲತಿ ನಿಗದಿತ ಅವಧಿಯೊಳಗೆ ಮನೆಗೆ ಹೋಗದೆ ಇದ್ದಾಗ ರಾಘವೇಂದ್ರ ತನ್ನ ಪತ್ನಿ ಮಾಲತಿ ವಿರುದ್ಧ ವಿಚ್ಚೇದನ ಕೋರಿ ಸೊರಬದ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಲಯದಲ್ಲಿ ಪುನಃ ಅರ್ಜಿ ಸಲ್ಲಿಸಿದ್ದರು. ಪತ್ನಿ ಮಾಲತಿ ಸದ್ರಿ ಪ್ರಕರಣಕ್ಕೆ ಹಾಜರಾಗಿ ನಂತರ ವಿಚ್ಚೇದನ ಅರ್ಜಿಯನ್ನು ಉಡುಪಿಗೆ ವರ್ಗಾಯಿಸಬೇಕೆಂದು ಮಾನ್ಯ ಉಚ್ಚ ನ್ಯಾಯಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಮಾನ್ಯ ಉಚ್ಚ ನ್ಯಾಯಲಯ ಸದ್ರಿ ಪ್ರಕರಣವನ್ನು ಉಡುಪಿಯ ಕೌಟುಂಬಿಕ ನ್ಯಾಯಲಯಕ್ಕೆ ವರ್ಗಾಯಿಸಲು ಆದೇಶ ನೀಡಿದ್ದು, ನಂತರ ಉಭಯರು ಉಡುಪಿಯ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಅರ್ಜಿದಾರರ ಹಾಗು ಎದುರುದಾರರ ಪರ ಹಾಜರಾದ ವಕೀಲರು ಈ ಪ್ರಕರಣ ರಾಜಿಯಿಂದ ಬಗೆಹರಿಸಿಕೊಳ್ಳಬಹುದಾದ ಪ್ರಕರಣವೆಂದು ತಿಳಿದು ಲೋಕ ಅದಾಲತ್‍ನಲ್ಲಿ ಇತ್ಯಾರ್ಥಪಡಿಸಲು ನ್ಯಾಯಾಲಯಕ್ಕೆ ಮನವರಿಕೆ ಮಾಡಿದರು.
ದಿನಾಂಕ 14 ರಂದು ನಡೆದ ರಾಷ್ಟ್ರಿಯ ಲೋಕ ಅದಾಲತ್‍ನಲ್ಲಿ ಅರ್ಜಿದಾರರು ಮತ್ತು ಎದುರುದಾರರನ್ನು ಒಟ್ಟಾಗಿ ಜೀವನ ಸಾಗಿಸುವಂತೆ ಮನವೊಲಿಸಿದ್ದು, ಅರ್ಜಿದಾರರು ಮತ್ತು ಎದುರುದಾರರು ಪರಸ್ಪರ ಪತಿ-ಪತ್ನಿಯರಾಗಿ ಜೀವನ ಸಾಗಿಸಲು ಸಂತೋಷದಿಂದ ಒಪ್ಪಿಕೊಂಡರು.
ಕೌಟುಂಬಿಕ ನ್ಯಾಯಲಯದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರನ್ಯಾಯಧೀಶ ಕಿರಣ್ ಎಸ್ ಗಂಗಣ್ಣವರ್ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಧೀಶ ಶ್ರೀನಿವಾಸ ಸುವರ್ಣ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಕಾರ್ಯದರ್ಶಿ ಪಿ.ಆರ್ ಯೋಗೇಶ್ ವಕೀಲರ ಸಂಘದ ಅಧ್ಯಕ್ಷರಾದ ರೆನೋಲ್ಡ್ ಪ್ರವೀಣ್‍ಕುಮಾರ್ , ಉಪಾಧ್ಯಕ್ಷರಾದ ಮಿತ್ರಕುಮಾರ್ ಶೆಟ್ಟಿ, ನ್ಯಾಯಾಂಗೇತರ ಸಂದಾನಕಾರರಾದ ಮತ್ತು ವಕೀಲರಾದ ರಮೇಶ್ ಶೆಟ್ಟಿ ಅರ್ಜಿದಾರರ ಪರ ನ್ಯಾಯವಾದಿ
ಎಚ್.ಆನಂದ ಮಡಿವಾಳ ಎದುರುದಾರರ ಪರ ನ್ಯಾಯವಾದಿ ಮೇಡಂ. ಶಶಿಕಲಾ ತೋನ್ಸೆಯವರ ಸಮ್ಮುಖದಲ್ಲಿ ದಂಪತಿಗಳು ಪರಸ್ಪರ ಮಾಲಾರ್ಪಣೆ ಮಾಡಿಕೊಂಡು ತಮ್ಮ ಮಗುವಿನೊಂದಿಗೆ ಹೊಸ ದಾಂಪತ್ಯ ಜೀವನಕ್ಕೆ ನಾಂದಿಹಾಡಿದರು. ದಂಪತಿಗಳು ಒಂದಾದ ಬಗ್ಗೆ ಕೌಟುಂಬಿಕ ನ್ಯಾಯಾಲಯದಲ್ಲಿ
ಸಿಹಿ ಹಂಚಿ ಸಂಭ್ರಮಾಚರಿಸಲಾಯಿತು.