ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ವಿಧಿವಶ

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ವಿಧಿವಶ

ನವದೆಹಲಿ, ಡಿ.26 : ತೀವ್ರ ಆರೋಗ್ಯ ಹದಗೆಟ್ಟ ಹಿನ್ನಲೆಯಲ್ಲಿ ಗುರುವಾರ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮನಮೋಹನ್‌ ಸಿಂಗ್‌ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.

ಡಾ. ಸಿಂಗ್ ಅವರು ಪತ್ನಿ ಗುರುಶರಣ್ ಕೌರ್ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ಅವರು ದೀರ್ಘಕಾಲದ ಅನಾರೋಗ್ಯದಲ್ಲಿದ್ದರು. ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ರಾಜನೀತಿಜ್ಞರಾಗಿರುವ ಸಿಂಗ್ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಗುರುವಾರ ಸಂಜೆ ದೆಹಲಿಯ ಏಮ್ಸ್‌ಗೆ ದಾಖಲಾಗಿದ್ದರು. ಮನ್‌ಮೋಹನ್‌ ಸಿಂಗ್ ಅವರು ಇತ್ತೀಚಿನ ವರ್ಷಗಳಲ್ಲಿ ಆರೋಗ್ಯದ ಕಾರಣಗಳಿಂದ ರಾಜಕೀಯದಿಂದ ದೂರವಿದ್ದರು ಮತ್ತು 2024ರ ಆರಂಭದಿಂದಲೂ ಅವರ ಆರೋಗ್ಯ ಚೆನ್ನಾಗಿರಲಿಲ್. 2024ರ ಜನವರಿಯಲ್ಲಿ ಅವರು ಕೊನೆಯ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಮಗಳ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಭಾಗಿಯಾಗಿದ್ದರು.

1991 ರಲ್ಲಿ ರಾಜ್ಯಸಭೆಗೆ ಪ್ರವೇಶ ಮಾಡುವ ತಮ್ಮ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದ ಸಿಂಗ್, 2024ರ ಏಪ್ರಿಲ್​ನಲ್ಲಿ ಅವರ ರಾಜ್ಯಸಭೆ ಅಧಿಕಾರವಧಿ ಅಂತ್ಯವಾಗಿತ್ತು. ಈ ಮೂಲಕ ಅವರು ಸಂಸತ್ತಿನ ಮೇಲ್ಮನೆಯಲ್ಲಿ 33 ವರ್ಷಗಳ ಕಾಲ ಇದ್ದರು.
ದೇಶದ ಆರ್ಥಿಕ ಸುಧಾರಣೆಗಳ ದಿಟ್ಟ ಹೆಜ್ಜೆ ಕೈಗೊಂಡು, ಆಧುನಿಕ ಭಾರತದ ಆರ್ಥಿಕತೆಯ ರೂವಾರಿ ಎನಿಸಿದ್ದ ಸಿಂಗ್, 1991ರ ಅಕ್ಟೋಬರ್‍ನಲ್ಲಿ ಮೊದಲ ಬಾರಿಗೆ ರಾಜ್ಯಸಭೆ ಪ್ರವೇಶಿಸಿದ್ದರು. ಅವರು 1991ರಿಂದ 1996ರವರೆಗೆ ನರಸಿಂಹ ರಾವ್ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದರು. ಬಳಿಕ 2004 ರಿಂದ 2014ರವರೆಗೆ ದೇಶದ ಪ್ರಧಾನಿಯಾಗಿದ್ದರು.

ಮನಮೋಹನಸಿಂಗ್ ಅವರು 1932ರ ಸೆಪ್ಟೆಂಬರ್ 26ರಂದು ಅವಿಭಜಿತ ಭಾರತದ ಪಂಜಾಬ್ ಪ್ರಾಂತ್ಯದಲ್ಲಿ ಜನಿಸಿದ್ದರು. ಡಾ. ಸಿಂಗ್ ಅವರು ಮೆಟ್ರಿಕ್ಯುಲೇಷನ್ ಪರೀಕ್ಷೆಯನ್ನು 1948ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಿದ್ದರು. ಅವರ ಶೈಕ್ಷಣಿಕ ಸಾಧನೆ ಅವರನ್ನು ಪಂಜಾಬ್ ನಿಂದ ಇಂಗ್ಲೆಂಡ್ ನ ಕೇಂಬ್ರಿಜ್ ವಿಶ್ವವಿದ್ಯಾಲಯಕ್ಕೆ ಕರೆದೊಯ್ಯಿತು. ಅಲ್ಲಿ ಅವರು 1957ರಲ್ಲಿ ಪ್ರಥಮ ದರ್ಜೆಯೊಂದಿಗೆ ಅರ್ಥಶಾಸ್ತ್ರದಲ್ಲಿ ಆನರ್ಸ್ ಪದವಿ ಪಡೆದರು.

ನಂತರ ಅವರು 1962ರಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ನಫ್ ಫೀಲ್ಡ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಡಿ.ಫಿಲ್ ಗೌರವ ಪಡೆದರು. ಅವರ ಕೃತಿ ಭಾರತದ ರಫ್ತು ಸ್ಥಿತಿ ಮತ್ತು ಸ್ವಾವಲಂಬಿ ಸುಸ್ಥಿರ ಪ್ರಗತಿಯಲ್ಲಿ ಅದರ ಭವಿಷ್ಯ “India’s Export Trends and Prospects for Self-Sustained Growth” [Clarendon Press, Oxford, 1964] ಭಾರತದ ಆಂತರಿಕ ಆಧಾರಿತ ವ್ಯಾಪಾರ ನೀತಿಯ ಆರಂಭಿಕ ವಿಮರ್ಶೆಯಾಗಿತ್ತು.

ಡಾ. ಮನಮೋಹನಸಿಂಗ್ ಅವರ ಶೈಕ್ಷಣಿಕ ಜ್ಞಾನ ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಹಾಗೂ ದೆಹಲಿಯ ಪ್ರತಿಷ್ಠಿತ ಆರ್ಥಿಕ ಶಾಲೆಯಲ್ಲಿ ಬೋಧಕರಾಗಿ ಸಾಕಾರಗೊಂಡವು.

ಯು.ಎನ್.ಸಿ.ಟಿ.ಎ.ಡಿ. ಸಚಿವಾಲಯದಲ್ಲಿ ಅವರು ಕೆಲಕಾಲ ಸೇವೆ ಸಲ್ಲಿಸಿದ್ದರು. ಇದರ ಫಲವಾಗಿ 1987ರಿಂದ 1990ರವರೆಗೆ ಅವರನ್ನು ಜೀನಿವಾದಲ್ಲಿನ ದಕ್ಷಿಣ ಆಯೋಗಕ್ಕೆ ಮಹಾಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು.

ಸ್ವತಂತ್ರ ಭಾರತದ ಆರ್ಥಿಕ ಇತಿಹಾಸದಲ್ಲಿ ಒಂದು ಮಹತ್ವದ ತಿರುವು ಮೂಡಿತು. 1991ರಿಂದ 1996ರವರೆಗೆ ಡಾ. ಸಿಂಗ್ ಅವರು ಭಾರತದ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರು ಆಗ ಮಾಡಿದ ಆರ್ಥಿಕ ಸುಧಾರಣೆಗಳಿಗೆ ಈಗಲೂ ವಿಶ್ವದ ಮನ್ನಣೆ ಇದೆ. ಜನಪ್ರಿಯದೃಷ್ಟಿಕೋನದಿಂದ ನೋಡುವುದಾದರೆ ಭಾರತದ ಅಂದಿನ ದಿನಗಳು ಡಾ. ಸಿಂಗ್ ಅವರ ವ್ಯಕ್ತಿತ್ವವನ್ನು ಬಿಂಬಿಸುತ್ತವೆ. ಡಾ. ಸಿಂಗ್ ಅವರು ಸಾಮಾಜಿಕ ಕ್ಷೇತ್ರದ ತಮ್ಮ ಅದ್ವಿತೀಯ ಸಾಧನೆಗಾಗಿ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಪ್ರಧಾನ ಮಂತ್ರಿಯಾಗಿ ಸಿಂಗ್ ಅವರ ಅಧಿಕಾರಾವಧಿಯು ಅಭೂತಪೂರ್ವ ಆರ್ಥಿಕ ಬೆಳವಣಿಗೆಯಿಂದ ಗುರುತಿಸಲ್ಪಟ್ಟಿದೆ, ಅದು ಭಾರತವನ್ನು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆ ಮತ್ತು MGNREGA ಮತ್ತು ಮಾಹಿತಿ ಹಕ್ಕು ಕಾಯಿದೆಯಂತಹ ಹೆಗ್ಗುರುತು ಸಾಮಾಜಿಕ ಸುಧಾರಣೆಗಳನ್ನು ಪ್ರಾರಂಭಿಸಿತು. ಅವರು ಐತಿಹಾಸಿಕ ಇಂಡೋ-ಯುಎಸ್ ನಾಗರಿಕ ಪರಮಾಣು ಒಪ್ಪಂದದ ಬಗ್ಗೆ ಮಾತುಕತೆ ನಡೆಸಿದರು, ಭಾರತಕ್ಕೆ ದಶಕಗಳ ಪರಮಾಣು ಪ್ರತ್ಯೇಕತೆಯನ್ನು ಕೊನೆಗೊಳಿಸಿದರು.

ಹಣಕಾಸು ಸಚಿವರಾಗಿ ಸಿಂಗ್ ಅವರ ಪಾತ್ರವನ್ನು ರಾಷ್ಟ್ರದ ಆರ್ಥಿಕ ಇತಿಹಾಸದಲ್ಲಿ ಒಂದು ಮಹತ್ವದ ತಿರುವು ಎಂದು ಪರಿಗಣಿಸಲಾಗಿದೆ. ಪಾವತಿ ಸಮತೋಲನ ಸಮಸ್ಯೆ ಮತ್ತು ಕ್ಷೀಣಿಸುತ್ತಿರುವ ವಿದೇಶಿ ಮೀಸಲು ಸಮಸ್ಯೆಯೊಂದಿಗೆ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದ ಹಂತದಲ್ಲಿ ಅವರು ಆರ್ಥಿಕತೆಯನ್ನು ಉದಾರೀಕರಣಗೊಳಿಸುವ, ಖಾಸಗೀಕರಣವನ್ನು ಉತ್ತೇಜಿಸುವ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತವನ್ನು ಸಂಯೋಜಿಸುವ ಪರಿವರ್ತಕ ಸುಧಾರಣೆಗಳನ್ನು ಪರಿಚಯಿಸಿದರು. ಈ ಕ್ರಮಗಳು ಬಿಕ್ಕಟ್ಟನ್ನು ತಪ್ಪಿಸಿದವು ಮಾತ್ರವಲ್ಲದೆ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗುವ ಹಾದಿಯಲ್ಲಿದೆ.

Leave a Reply

Your email address will not be published. Required fields are marked *