ಕೌಟುಂಬಿಕ ಕಲಹ : ಶಿವಮೊಗ್ಗದಲ್ಲಿ ಆನಂದಪುರದ ರುಕ್ಸಾನಳ ಹತ್ಯೆ – ಗಂಡನಿಂದಲೇ ನಡೆಯಿತು ಘೋರ ಕೃತ್ಯ
ಶಿವಮೊಗ್ಗ: ಕೌಟಂಬಿಕ ಕಲಹದ ಹಿನ್ನೆಲೆಯಲ್ಲಿ, ಪತಿಯೋರ್ವ ಪತ್ನಿಗೆ ಚೂರಿಯಿಂದ ಇರಿದು ಕೊ*ಲೆ ಮಾಡಿರುವ ಘಟನೆ, ಶಿವಮೊಗ್ಗ ನಗರದ ವಾದಿ ಎ ಹುದಾ ಬಡಾವಣೆ ಯಲ್ಲಿ ಭಾನುವಾರ ನಡೆದಿದೆ.
ಆನಂದಪುರದ ನಿವಾಸಿ ರುಕ್ಸನಾ (೩೮) ಹತ್ಯೆಗೀಡಾದ ದುರ್ಧೈವಿಯಾಗಿದ್ದಾರೆ.
ಎಸಿ ಮೆಕಾನಿಕ್ ಕೆಲಸ ಮಾಡುವ ಪತಿ ಯೂಸೂಫ್ ರೌಫ್ (೪೫) ರನ್ನು ತುಂಗಾನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ.
ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಬೆಳಿಗ್ಗೆ ಪತಿ ಹಾಗೂ ಪತ್ನಿ ನಡುವೆ ಕಲಹ ಏರ್ಪಟ್ಟಿದೆ. ಇದು ವಿಕೋಪಕ್ಕೆ ತಿರುಗಿ, ಆರೋಪಿಯು ಚಾಕುವಿನಿಂದ ಪತ್ನಿಗೆ ಇರಿದು ಕೊ*ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಎಸ್ಪಿ ಜಿ ಕೆ ಮಿಥುನ್ ಕುಮಾರ್, ಡಿವೈಎಸ್ಪಿ ಬಾಬು ಆಂಜನಪ್ಪ, ಇನ್ಸ್’ಪೆಕ್ಟರ್ ಕೆ ಟಿ ಗುರುರಾಜ್ ಮತ್ತವರ ಸಿಬ್ಬಂದಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?
ಮೂಲತಃ ಆನಂದಪುರದ ನಿವಾಸಿಯಾಗಿರುವ ರುಕ್ಸಾನಾಗೂ ಪತಿಗೂ ಒಂದು ವಾರದ ಹಿಂದೆ ಜಗಳವಾಗಿತ್ತು. ಇದೇ ಕಾರಣಕ್ಕೆ ತನ್ನ ತವರುಮನೆಗೆ ಹೋಗಿದ್ದಳು. ನಿನ್ನೆ ಯೂಸುಫ್ ಮಗಳಿಗೆ ಹುಷಾರ್ ಇಲ್ಲ ಎಂದು ಹೇಳಿ ತನ್ನ ಪತ್ನಿಗೆ ಕರೆ ಮಾಡಿ ಬರುವಂತೆ ತಿಳಿಸಿದ್ದ. ಆದರೆ ಜಗಳದ ಹಿನ್ನೆಲೆಯಲ್ಲಿ ರುಕ್ಸಾನಾ ಮತ್ತವರ ಪೋಷಕರು ನೇರವಾಗಿ ಮಗಳನ್ನು ಅಡ್ಮಿಟ್ ಮಾಡಿರುವ ಆಸ್ಪತ್ರೆಗೆ ಬರುವುದಾಗಿ ಹೇಳಿದ್ದರು. ಇದಕ್ಕೆ ಯೂಸುಫ್, ಮಗಳನ್ನು ಡಿಸ್‌ಚಾರ್ಜ್ ಮಾಡಿಕೊಂಡು ಬಂದಿದ್ದೇನೆ ಹಾಗಾಗಿ ಅಣ್ಣನ ಮನೆಗೆ ಬರುವಂತೆ ತಿಳಿಸಿದ್ದ. ಆತನ ಮಾತಿನಂತೆ ರುಕ್ಸಾನಾ ಹಾಗೂ ಅವಳ ಪೋಷಕರು ಯೂಸುಫ್‌ನ ಅಣ್ಣನ ಮನೆಗೆ ನಿನ್ನೆ ಬಂದಿದ್ದರು. ಇವತ್ತು ಬೆಳಗ್ಗೆ ರುಕ್ಸಾನಾ ಜೊತೆ ಪರ್ಸನಲ್ ಆಗಿ ಮಾತನಾಡಬೇಕು ಎಂದು ಹೇಳಿ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ.
ಅಲ್ಲಿಗೆ ತೆರಳಿದ ೧೫ ನಿಮಿಷದಲ್ಲಿ ಆಕೆಯ ಜೊತೆಗೆ ಜಗಳ ತೆಗೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎನ್ನುತ್ತದೆ ಪೊಲೀಸ್ ಮೂಲ.
ಆರೋಪಿ ಯೂಸುಫ್‌ನ ಸಹೋದರ ಹೇಳಿದೇನು..??
ಯೂಸುಫ್‌ನ ಸಹೋದರ ಇಸ್ಮಾಯಿಲ್ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿರುವ ಪ್ರಕಾರ, ರುಕ್ಸಾನ ತವರು ಮನೆಗೆ ಹೋಗಿದ್ದಳು. ಇವತ್ತು ಆಕೆಯನ್ನ ತನ್ನ ಮನೆಗೆ ಕರೆದುಕೊಂಡು ಹೋದ ಯೂಸುಫ್ ಅವಳನ್ನ ಕೊಲೆ ಮಾಡಿದ್ದಾನೆ. ಇದಕ್ಕೆ ಆಕೆ ಇನ್ನೊಬ್ಬರ ಜೊತೆ ಸಂಬಂಧ ಇದೆ ಎಂಬ ಅನುಮಾನ ಕಾರಣ ಎಂಬುದು ಇಸ್ಮಾಯಿಲ್‌ರವರ ಆರೋಪ.
ರುಕ್ಸಾನಳಿಗೆ ಅಕ್ರಮ ಸಂಬಂಧ ಇದೆ ಎಂಬ ಅನುಮಾನ ಹೊಂದಿದ್ದ ಯೂಸುಫ್ ಅದಕ್ಕೆ ಸಂಬಂಧಿಸಿದಂತೆ ಮೊಬೈಲ್ ಕರೆಗಳ ಸಾಕ್ಷ್ಯ ತೋರಿಸಿ ಜಗಳವಾಡಿದ್ದ. ಇದೇ ಕಾರಣಕ್ಕೆ ಆಕೆಯನ್ನು ತವರಿಗೆ ಕಳುಹಿಸಿದ್ದ ಯೂಸುಫ್ ಇವತ್ತು ತನ್ನ ಮನೆಗೆ ಕರೆದುಕೊಂಡು ಹೋಗಿ ಹತ್ಯೆ ಮಾಡಿದ್ದಾನೆ. ಬಳಿಕ ರುಕ್ಸಾನಾರ ಸಂಬಂಧಿಕರಿಗೆ ತಿಳಿಸಿದ್ದರಿಂದ ಘಟನೆ ಬಯಲಿಗೆ ಬಂದಿದೆ ಎನ್ನುತ್ತಾರೆ ಇಸ್ಮಾಯಲ್.
ಘಟನೆ ಬಗ್ಗೆ ಸ್ಥಳೀಯರು ಹೇಳಿದ್ದೇನು..???
ಸ್ಥಳೀಯರು ರುಕ್ಸಾನಾ ಒಳ್ಳೆಯ ಗೃಹಿಣಿಯಾಗಿದ್ದಾರೆ ಎಂದು ಹೇಳುತ್ತಿದ್ದಾರೆ. ಕುಟುಂಬಸ್ಥರಲ್ಲಿಯು ರುಕ್ಸಾನಾ ಬಗ್ಗೆ ಉತ್ತಮ ಅಭಿಪ್ರಾಯವಿದೆ. ಜಗಳದ ವಿಚಾರದಲ್ಲಿ ಮಾತುಕತೆಗಳು ನಡೆದಿದ್ದವು ಎನ್ನಲಾಗುತ್ತೆ. ರುಕ್ಸಾನಾ ಸಂಬಂಧಿಕರು ಸಹ ಯೂಸುಫ್ ಕಡೆಯವರ ಆರೋಪವನ್ನು ಅಲ್ಲಗಳೆದಿದ್ದಾರೆ.
ಈ ಸಂಬಂಧ ತನಿಖೆ ಆರಂಭಿಸಿರುವ ಪೊಲೀಸರು ಯೂಸುಫ್‌ನನ್ನ ವಶಕ್ಕೆ ಪಡೆದು, ಪ್ರಕರಣದ ಕಾನೂನು ಪ್ರಕ್ರಿಯೆಗಳನ್ನ ನಡೆಸ್ತಿದ್ದಾರೆ. ಅಲ್ಲದೆ ಇಡೀ ಪ್ರಕರಣವನ್ನು ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ನಡೆಸ್ತಿದ್ದಾರೆ. ಒಟ್ಟಾರೆ ೩೮ ವರ್ಷದ ರುಕ್ಸಾನ ಹಾಗೂ ಯೂಸುಫ್‌ನ ನಡುವೆ ಮೂಡಿದ ಸಂಶಯದಿಂದಾಗಿ ರುಕ್ಸಾನ ಸಾವನ್ನಪ್ಪಿದ್ದಾಳೆ. ಎಸಿ ಮೆಕಾನಿಕ್ ಆಗಿ ಇಲ್ಲಿವರೆಗೂ ಸುಂದರ ಸಂಸಾರ ನಡೆಸಿದ್ದ ಯೂಸುಫ್ ಪೊಲೀಸ್ ವಶದಲ್ಲಿದ್ದಾನೆ.