ಕನ್ನಡಿಗ ಕೆ ಎಲ್ ರಾಹುಲ್ ಕೈಬಿಟ್ಟು, ಲಿವಿಂಗ್‌ಸ್ಟೋನ್ ಖರೀದಿಸಿದ ಆರ್‌ಸಿಬಿ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೊನೆಗೂ ಕನ್ನಡಿಗ ಕೆ ಎಲ್ ರಾಹುಲ್ ಅವರನ್ನು ಖರೀದಿಸಲಿದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಕೆ ಎಲ್ ರಾಹುಲ್ ಅವರನ್ನು ಕೈಬಿಟ್ಟ ಆರ್‌ಸಿಬಿ, ಇಂಗ್ಲೆಂಡ್ ಬ್ಯಾಟಿಂಗ್ ಆಲ್ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ.
2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಇಂಗ್ಲೆಂಡ್ ಮೂಲದ ಬ್ಯಾಟಿಂಗ್ ಆಲ್ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಖರೀದಿಸಲು ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಪೈಪೋಟಿ ನಡೆಸಿತಾದರೂ ಕೊನೆಗೂ ಆರ್‌ಸಿಬಿ ಫ್ರಾಂಚೈಸಿ 8.75 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು.
ಕೆ ಎಲ್ ಕೈಬಿಟ್ಟ ಆರ್‌ಸಿಬಿ: ಲಖನೌ ಸೂಪರ್ ಜೈಂಟ್ಸ್ ತಂಡವನ್ನು ತೊರೆದು ಹರಾಜಿಗೆ ಬಂದಿದ್ದ ಕೆ ಎಲ್ ರಾಹುಲ್ ಅವರನ್ನು 14 ಕೋಟಿ ರುಪಾಯಿ ನೀಡಿ ಖರೀದಿಸುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಯಶಸ್ವಿಯಾಗಿದೆ. ಆರಂಭದಿಂದಲೇ ಕೆ ಎಲ್ ರಾಹುಲ್ ಖರೀದಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಪೈಪೋಟಿ ನಡೆಸಿದವು. ಆದರೆ ಕೊನೆಯಲ್ಲಿ ಹರಾಜಿಗೆ ಎಂಟ್ರಿಕೊಟ್ಟ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು 14 ಕೋಟಿ ರುಪಾಯಿಗೆ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಆರ್‌ಸಿಬಿ ತಂಡವು ಹರಾಜಿಗೂ ಮುನ್ನ ವಿರಾಟ್ ಕೊಹ್ಲಿ, ರಜತ್ ಪಾಟೀದಾರ್ ಹಾಗೂ ಯಶ್ ದಯಾಳ್ ಅವರನ್ನು ರೀಟೈನ್ ಮಾಡಿಕೊಂಡಿದ್ದು, ಇದೀಗ ಮೆಗಾ ಹರಾಜಿಗೆ 83 ಕೋಟಿ ರುಪಾಯಿಗಳನ್ನು ಉಳಿಸಿಕೊಂಡಿತ್ತು. ಇದೀಗ ಹರಾಜಿನಲ್ಲಿ ಮೊದಲ ಆಟಗಾರನಾಗಿ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ.