40 ಕೆಜಿ ಮಾಂಸ ಸಮೇತ ಕಾಡು ಹಂದಿ ಬೇಟೆಗಾರರ ಬಂಧನ
40 ಕೆ.ಜಿ. ಮಾಂಸ ಸಹಿತ ಕಾಡುಹಂದಿ ಬೇಟೆಗಾರರನ್ನು ಬಂಧಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹರತಾಳು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆ ಹುಣಸವಳ್ಳಿ ಗ್ರಾಮದಲ್ಲಿ ನಡೆದಿದೆ.
ಕಾಡುಹಂದಿಯನ್ನು ಬೇಟೆಯಾಡಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯಾಧಿಕಾರಿಗಳು ಮೂವರ ವಿರುದ್ಧ ಪ್ರಕರಣ ದಾಖಲಿಸಿ ಓರ್ವನನ್ನು ಬಂಧಿಸಿದ್ದಾರೆ.
ಕೆ ಹುಣಸವಳ್ಳಿ ಗ್ರಾಮದ ಡಾಕಪ್ಪ ಬಿನ್ ಮಂಜಪ್ಪ, ಕಾರ್ತಿಕ್ ಬಿನ್ ಡಾಕಪ್ಪ ಹಾಗೂ ಗಣೇಶ ಬಿನ್ ಈಶ್ವರನಾಯ್ಕ ಎಂಬುವವರು ಕಾಡು ಹಂದಿಯನ್ನು ಬೇಟೆಯಾಡಿ ಮಾಂಸ ತಯಾರಿಸುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಎಸಿಎಫ್ ಮೋಹನ್ ಕುಮಾರ್ ನೇತೃತ್ವದ ಅಲಗೇರಿಮಂಡ್ರಿ ವ್ಯಾಪ್ತಿಯ ಡಿ.ಆರ್.ಎಫ್.ಓ ನವೀನ್ ಕುಮಾರ್ ತಂಡ ಅಂದಾಜು 40 ಕೆ.ಜಿ ಮಾಂಸ ಸಮೇತ ಆರೋಪಿ ಗಣೇಶ್ ಬಿನ್ ಈಶ್ವರ್ ನಾಯ್ಕ್ ನ್ನು ಬಂಧಿಸಿದ್ದು ಇನ್ನಿಬ್ಬರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಎಸಿಎಫ್ ಮೋಹನ್ ಕುಮಾರ್, ಆರ್‌ಎಫ್ಒ ಅನಿಲ್ ಕುಮಾರ್, ಡಿ.ಆರ್.ಎಫ್.ಓ ನವೀನ್ ಕುಮಾರ್, ಅರಣ್ಯ ರಕ್ಷಕರಾದ ರಾಜು ಎನ್, ಪುಟ್ಟಸ್ವಾಮಿ, ಭರತ್ ಹಾಗೂ ಇನ್ನಿತರ ಸಿಬ್ಬಂದಿಗಳಿದ್ದರು.