ಕಬ್ಬಡಿ ಪಂದ್ಯಾವಳಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಶ್ರೀ ಶಾರದಾ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿಗಳು
ರಿಪ್ಪನ್‌ಪೇಟೆ : ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ನಗರದಲ್ಲಿ ಅ. 09 ರಿಂದ 10ರ ವರೆಗೆ ನಡೆದ ಬೆಂಗಳೂರು ವಿಭಾಗ ಮಟ್ಟದ ಕಬ್ಬಡಿ ಕ್ರೀಡಾಕೂಟದಲ್ಲಿ ಪಟ್ಟಣದ ಶಾರದಾ, ರಾಮಕೃಷ್ಣ ವಿದ್ಯಾಲಯ ವಿದ್ಯಾರ್ಥಿಗಳು ಅಮೋಘ ಪ್ರದರ್ಶನ ನೀಡುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶಾರದ,ರಾಮಕೃಷ್ಣ ವಿದ್ಯಾಲಯದ 7 ವಿದ್ಯಾರ್ಥಿಗಳು ಈ ಕ್ರೀಡಾಕೂಟದಲ್ಲಿ ಶಿವಮೊಗ್ಗ ಜಿಲ್ಲೆಯನ್ನು ಪ್ರತಿನಿಧಿಸಿದ್ದು 17 ವರ್ಷ ವಯೋಮಿತಿಯೊಳಗಿನ ಕಬಡ್ಡಿ ಪಂದ್ಯಾವಳಿಯಲ್ಲಿ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
17 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಶ್ರಾವ್ಯ, ಐಶ್ವರ್ಯ, ದೀಕ್ಷಾ ಮತ್ತು ಸಂಜನ, ಶ್ರೇಯಾ , ವಂದನಾ , ಶಮಿತಾ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಕಳೆದ ಬಾರಿ ಪಂಜಾಬ್ ನಲ್ಲಿ ನಡೆದ ರಾಷ್ಟ್ರಮಟ್ಟದ ಕಬ್ಬಡಿ ಪಂದ್ಯಾವಳಿಯಲ್ಲಿ ಶ್ರೀ ಶಾರದ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿನಿಯರಾದ ಶ್ರೇಯಾ ಬಿ ಆರ್ ನಾಯಕ್ ಮತ್ತು ಶ್ರಾವ್ಯ ಹೆಚ್ ಓ ಮತ್ತು ಶಮಿತಾ ಕರ್ನಾಟಕ ತಂಡವನ್ನು ಪ್ರತಿನಿಧಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಈ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ದೈಹಿಕ ಶಿಕ್ಷಕರಾದ ವಿನಯ್ ಹಾಗೂ ತಂಡದ ವ್ಯವಸ್ಥಾಪಕಿ ಶ್ಯಾಮಲಾ ಹಾಗೂ ತರಬೇತಿ ನೀಡಿದ ಎಲ್ಲರಿಗೂ ರಾಮಕೃಷ್ಣ ಸಮೂಹ ಸಂಸ್ಥೆಗಳ ಸಂಸ್ಥಾಪಕ ಡಿ.ಎಂ ದೇವರಾಜ್, ಮುಖ್ಯ ಶಿಕ್ಷಕ ರವಿ ಹಾಗೂ ವ್ಯವಸ್ಥಾಪಕ ಸಂದೇಶ್, ಹಿರಿಯ ಶಿಕ್ಷಕ ಗುರುರಾಜ್ ಹಾಗೂ ಸಂಸ್ಥೆಯ ಎಲ್ಲ ಶಿಕ್ಷಕರು ಹಾಗೂ ಎಲ್ಲಾ ಪೋಷಕರು ಅಭಿನಂದಿಸಿದ್ದಾರೆ.
17 ವರ್ಷದ ವಯೋಮಿತಿಯೊಳಗಿನ ವಿಭಾಗ ಮಟ್ಟದಲ್ಲಿ ದೈಹಿಕ ಶಿಕ್ಷಕ ವಿನಯ್ ನೇತ್ರತ್ವದಲ್ಲಿ ಸತತವಾಗಿ ಮೂರು ವರ್ಷಗಳಿಂದ ಜಯಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುತ್ತಿರುವ ಶ್ರೀ ಶಾರದಾ ರಾಮಕೃಷ್ಣ ವಿದ್ಯಾಲಯ ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ತನ್ನದೇ ಆದ ಛಾಪು ಮೆರೆಯುತ್ತಿದೆ.