ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸಿ – ಶಾಸಕ ಬೇಳೂರು ಗೋಪಾಲಕೃಷ್ಣ

ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸಿ

ರಿಪ್ಪನ್‌ಪೇಟೆ : ಬೆಳೆಯುವ ಮಕ್ಕಳಲ್ಲಿ ಕ್ರೀಡಾ ಶಕ್ತಿ ಬೆಳೆಸುವ ಅಗತ್ಯವಿದ್ದು, ಉಲ್ಲಸಿತ ಜೀವನಕ್ಕೆ ಸದೃಢ ಶರೀರಕ್ಕೆ ಕ್ರೀಡೆಗಳು ಸಹಕಾರಿಯಾಗಿವೆ. ಇಂದಿನ ಮಕ್ಕಳಲ್ಲಿ ಕ್ರೀಡಾ ಪ್ರವೃತ್ತಿ ಬೆಳೆದು ಬರುವ ಅಗತ್ಯವಿದೆ ಎಂದು ಶಾಸಕ ರಾಜ್ಯ ಅರಣ್ಯ ಅಭಿವೃದ್ದಿ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.

ಪಟ್ಟಣದ ಶ್ರೀಶಾರದಾ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿಗಳು ಕಬಡ್ಡಿ ಕ್ರೀಡಾಕೂಟದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಕ್ರೀಡಾಪಟುಗಳನ್ನು ಸನ್ಮಾನಿಸಿ ಮಾತನಾಡಿ, ಮಕ್ಕಳಲ್ಲಿ ಶಿಕ್ಷಣದೊಂದಿಗೆ ಕ್ರೀಡೆಯಲ್ಲಿಯೂ ತಮ್ಮ ಪ್ರತಿಭೆಯನ್ನು ಗುರುತಿಸಿಕೊಳ್ಳುವ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೆ ಏರಿಸಿದ್ದೀರಿ ನಿಮ್ಮ ಈ ಸಾಧನೆಯೊಂದಿಗೆ ಮಕ್ಕಳ ವ್ಯಕ್ತಿತ್ವ ವಿಕಾಸನಕ್ಕೆ ಮಾರ್ಗದರ್ಶಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಕ್ರೀಡಾಸಕ್ತಿ ಕಡಿಮೆಯಾಗುತ್ತಿದ್ದು, ಬಹಳಷ್ಟು ಮಕ್ಕಳಲ್ಲಿ ದಿಟ್ಟತನ ಹೋರಾಟ ಮನೋಭಾವ, ಧೈರ್ಯವಂತಿಕೆ ಇಲ್ಲದಂತಾಗಿದೆ. ದೈಹಿಕ ಬಲ ಮತ್ತು ಆತ್ಮ ಬಲ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಸಹ ಬಹಳಷ್ಟು ಮಕ್ಕಳು ಹಿಂದೆ ಇದ್ದಾರೆ. ಓದುವುದು ಎಷ್ಟು ಮುಖ್ಯವೋ ಕ್ರೀಡಾ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಅಷ್ಟೇ ಮುಖ್ಯ. ಮಕ್ಕಳಲ್ಲಿ ಕ್ರಿಯಾಶೀಲತೆ, ಸಂಸ್ಕೃತಿ ಮತ್ತು ಸಭ್ಯತೆ ಬೆಳೆಸುವ ಮಹತ್ಕಾರ್ಯವನ್ನು ರಾಮಕೃಷ್ಣ ವಿದ್ಯಾಲಯ ಮಾಡಿಕೊಂಡು ಬರುತ್ತಿದೆ ಎಂದರು.

ಕ್ರೀಡಾ ಸಾಧನೆ ಮಾಡಿರುವ ಮಕ್ಕಳನ್ನು ಸನ್ಮಾನಿಸಿ ಪ್ರೋತ್ಸಾಹಿಸುವುದರಿಂದ ಇನ್ನೊಬ್ಬರಿಗೆ ಪ್ರೇರಣೆಯಾಗುವುದೆಂದು ಹೇಳಿ, ತ್ಯಾಗ ಪರಿಶ್ರಮ ವಿನಿಯೋಗಿಸಿ ಸಾಧನೆ ಮೆರೆದಿದ್ಧಾರೆಂದು ಹೇಳಿ, ಸದಾ ತಂದೆ-ತಾಯಿ ಗುರು-ಹಿರಿಯರನ್ನು ಗೌರವಿಸುವುದರೊಂದಿಗೆ ಭಾರತ ದೇಶದಲ್ಲಿ ಶಿಕ್ಷಣ ಕ್ರಾಂತಿ ನಡೆಯುತ್ತಿದ್ದು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದು ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತಾಗಲಿ ಎಂದು  ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಶಾರದಾ ರಾಮಕೃಷ್ಣ ವಿದ್ಯಾಲಯದ ಸಂಸ್ಥಾಪಕ ಡಿ.ಎಂ.ದೇವರಾಜ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಂಡಿ ರಾಮಚಂದ್ರ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿ, ಗ್ರಾಮ ಪಂಚಾಯ್ತಿ ಸದಸ್ಯರಾದ ಡಿ.ಈ. ಮಧುಸೂಧನ್, ಎನ್.ಚಂದ್ರೇಶ್, ಸುಂದರೇಶ್, ಅಸಿಫ್ ಭಾಷಾ, ಸರಾಭಿ ಹೈದರಾಲಿಖಾನ್, ನಿರೂಪಮ ರಾಕೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಣಪತಿ, ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ರವೀಂದ್ರ ಕೆರೆಹಳ್ಳಿ, ನರಸಿಂಹ, ಪ್ರಕಾಶ ಪಾಲೇಕರ್, ಸಿ.ಆರ್.ಪಿ.ಮಂಜುನಾಥ, ಸರಿತಾ ದೇವರಾಜ್ ಇನ್ನಿತರರು ಹಾಜರಿದ್ದರು.

ವಿದ್ಯಾರ್ಥಿಗಳಾದ ಆಶಿಕಾ ಸಂಗಡಿಗರು ಪ್ರಾರ್ಥಿಸಿದರು. ಸಹ ಶಿಕ್ಷಕಿ ಕೆ.ಜಿ. ಶಾಲಿನಿ ನಿರೂಪಿಸಿದರು. ಮುಖ್ಯೋಪಾಧ್ಯಾಯ ರವಿ ವಂದಿಸಿದರು.

Leave a Reply

Your email address will not be published. Required fields are marked *