ಚೀನಾ ಬೆಳ್ಳುಳ್ಳಿ ಮಾರಾಟ ಮಳಿಗೆಗಳ ಮೇಲೆ ಅಧಿಕಾರಿಗಳ ದಾಳಿ – ಆರೋಗ್ಯಕ್ಕೆ ಹಾನಿಕಾರವಾದ ಬೆಳ್ಳುಳ್ಳಿ ಬಗ್ಗೆ ಇರಲಿ ಎಚ್ಚರ.!!!
ಭಾರತದ ಮಾರು ಕಟ್ಟೆಯಲ್ಲಿ ನಿಷೇಧಿಸಿರುವ ಚೀನದ ಬೆಳ್ಳುಳ್ಳಿ ಈಗ ಕಳ್ಳಮಾರ್ಗದ ಮೂಲಕ ಶಿವಮೊಗ್ಗ ಮಾರುಕಟ್ಟೆ ಪ್ರವೇಶಿಸಿದ್ದು, ಅಧಿಕಾರಿಗಳು50 ಕೆ.ಜಿ.ಗೂ ಹೆಚ್ಚು ಬೆಳ್ಳುಳ್ಳಿ ವಶಪಡಿಸಿಕೊಂಡು ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಅಲಹಾಬಾದ್ ಹೈಕೋರ್ಟ್‌ನಲ್ಲಿ ಚೀನ ಬೆಳ್ಳುಳ್ಳಿ ಕುರಿತು ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೇ 2 ದಿನಗಳಿಂದ ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಶಿವಮೊಗ್ಗ ದಲ್ಲಿ 8 ಕಡೆ ದಾಳಿ ನಡೆಸಿ 50 ಕೆ.ಜಿ.ಗೂ ಅಧಿಕ ಬೆಳ್ಳುಳ್ಳಿ ವಶಕ್ಕೆ ಪಡೆದಿದ್ದಾರೆ.
ಪ್ರಯೋಗಾಲಯದ ವರದಿ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಆಹಾರ ಸುರಕ್ಷೆ ಅಧಿಕಾರಿಗಳು ತಿಳಿಸಿದ್ದಾರೆ.
ಕೆ.ಜಿ.ಗೆ ಕೇವಲ 80 ರೂ.
ಸದ್ಯ ಮಾರುಕಟ್ಟೆಗಳಲ್ಲಿ ನಾಟಿ, ದೇಸಿ ಬೆಳ್ಳುಳ್ಳಿ ಕೆ.ಜಿ.ಗೆ 250-400 ರೂ. ವರೆಗೂ ಮಾರಾಟವಾಗುತ್ತಿದೆ. ಈ ನಡುವೆ ಮಾರುಕಟ್ಟೆಗಳಲ್ಲಿ ಕೆಲವು ವ್ಯಾಪಾರಸ್ಥರು ಚೀನ ಬೆಳ್ಳುಳ್ಳಿಯನ್ನು ದೇಶಿ ಬೆಳ್ಳುಳ್ಳಿ ಜತೆಗೆ ಮಾರಾಟ ಮಾಡುತ್ತಿದ್ದಾರೆ ಎನ್ನುವ ದೂರು ಕೇಳಿಬಂದಿದೆ. ಚೀನ ಬೆಳ್ಳುಳ್ಳಿ ಕೆಜಿಗೆ 80 ರೂ. ಆಗಿದ್ದು, ಸಸ್ತಾ ಮಾಲ್‌ನೊಂದಿಗೆ ಲಾಭದಾಯಕ ವ್ಯಾಪಾರ ನಡೆಸಲಾಗುತ್ತಿದೆ.
ಕಿಡ್ನಿ, ಲಿವರ್‌ಗೆ ಹಾನಿ
ಚೀನ ಬೆಳ್ಳುಳ್ಳಿ ದಪ್ಪ ಇರುವುದರಿಂದ ಬಿಡಿಸುವುದು ಸುಲಭ. ನಾಟಿ ಬೆಳ್ಳುಳ್ಳಿ ಆಕಾರದಲ್ಲಿ ಚಿಕ್ಕದಾಗಿದ್ದು ಬಿಡಿಸುವುದು ಸ್ವಲ್ಪ ಕಷ್ಟ. ಇದಕ್ಕಾಗಿ ದೊಡ್ಡ ಗಾತ್ರದ ಬೆಳ್ಳುಳ್ಳಿಗೆ ಗೃಹಿಣಿಯರು ಮಾರು ಹೋಗುತ್ತಾರೆ. ಇನ್ನೂ ಕೆಲವರು ನಾಟಿ ಬೆಳ್ಳುಳ್ಳಿಗೆ ದರ ಹೆಚ್ಚು ಎಂಬ ಕಾರಣಕ್ಕೆ ದೊಡ್ಡ ಬೆಳ್ಳುಳ್ಳಿ ಖರೀದಿ ಮಾಡುವುದುಂಟು. ಆದರೆ ಇದರಲ್ಲಿ ರಾಸಾಯನಿಕ ಬಳಸಿರುವುದರಿಂದ ಕಿಡ್ನಿ, ಲಿವರ್‌ಗೆ ಹಾನಿ ಸಾಧ್ಯತೆ ಇರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಏನಿದು ಚೀನ ಬೆಳ್ಳುಳ್ಳಿ ?
-ಚೀನ ಬೆಳ್ಳುಳ್ಳಿ ನೋಡಲು ದಪ್ಪವಾಗಿದ್ದು ಎಷ್ಟು ದಿನ ಇಟ್ಟರೂ ಕೆಡುವುದಿಲ್ಲ.
-ಅತಿಯಾದ ರಾಸಾಯನಿಕ ಬಳಸುವುದ ರಿಂದ ಕಾಲಕ್ರಮೇಣ ತೂಕವನ್ನೂ ಕಳೆದುಕೊಳ್ಳುವುದಿಲ್ಲ.
-ಕೇವಲ 80 ರೂ.ಗೆ 1 ಕೆ.ಜಿ. ಸಿಗುತ್ತದೆ.
-ಇದನ್ನು ತಿಂದರೆ ಕಿಡ್ನಿ, ಲಿವರ್‌ಗೆ ಹಾನಿ ಖಚಿತ.
-ಇದರ ಆಮದನ್ನು ಕೇಂದ್ರ ಸರಕಾರ ನಿಷೇಧಿಸಿದೆ.