POSTMAN NEWS

ನೈಜ ಸುದ್ದಿ ನೇರ ಬಿತ್ತರ..

RIPPONPETE | ಬೆಳ್ಳೂರು ಗ್ರಾಪಂ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ – ಅರಣ್ಯಾಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ

GridArt 20240928 183334645.jpg

RIPPONPETE | ಬೆಳ್ಳೂರು ಗ್ರಾಪಂ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ – ಅರಣ್ಯಾಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ

ರಿಪ್ಪನ್‌ಪೇಟೆ : ಕಾಡಾನೆಗಳ ದಾಳಿಯಿಂದ ಅನ್ನದಾತರು ಕಂಗೆಟಿದ್ದು,ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಜನತೆ ಬೇಸತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಮನಗದ್ದೆ, ಅಡ್ಡೇರಿಯಲ್ಲಿ ಕಾಡಾನೆಯ ಉಪಟಳ ಹೆಚ್ಚಾಗಿದ್ದು ಲಕ್ಷಾಂತರ ರೂ ಬೆಳೆ ನಾಶವಾಗಿದೆ.

ಹೊರಬೈಲು, ಮತ್ತಿಕೊಪ್ಪಪ, ಗಾಮನಗದ್ದೆಯಲ್ಲಿ ಕಳೆದ ಅನೇಕ ದಿನಗಳಿಂದ ಜಮೀನಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದೆ. ಶುಂಠಿ ಏರಿ ಮೇಲೆ ನಿರಂತರವಾಗಿ ಓಡಾಡುವುದರಿಂದ ಶುಂಠಿ ಏರಿ ಒಡೆದು ಬೆಳೆ ಹಾನಿಯಾಗಿದೆ. ಸಣ್ಣ ಸಣ್ಣ ಅಡಿಕೆ ಗಿಡಗಳನ್ನು ಮುರಿದು ಹಾಕುವುದಲ್ಲದೆ, ಸಣ್ಣ ಮರಗಳಿಗೆ ಮೈ ಉಜ್ಜಿಕೊಳ್ಳುವುದರಿಂದ ಮರಗಳು ಮುರಿದು ನಷ್ಟವಾಗುತ್ತಿದೆ.

ಪ್ರತಿನಿತ್ಯವೂ ಜಮೀನಿಗೆ ನುಗ್ಗಿ ದಾಂಧಲೆ ಮಾಡುತ್ತಿದ್ದು, ಸಂಜೆಯಾಗುತ್ತಿದ್ದಂತೆ ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕುವಂತಾಗಿದೆ. ಡೈರಿಗೆ ಹಾಲು ಹಾಕುವವರು, ದಿನನಿತ್ಯದ ಕೆಲಸ ಕಾರ್ಯಗಳಿಗೆ ಪಟ್ಟಣಗಳಿಗೆ ಹೋಗಿ ಬರುವವರು, ಶಾಲಾ ಮಕ್ಕಳು ಆತಂಕದಲ್ಲಿಯೇ ಸಂಚರಿಸುವಂತಾಗಿದೆ. ಗದ್ದೆ ಹೊಲಗಳಲ್ಲಿ ಕೆಲಸ ಮಾಡಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ.

ಸಿರಿಗೆರೆ ವಲಯ ಅರಣ್ಯಾಧಿಕಾರಿ ಕಚೇರಿ ಸಿಬ್ಬಂದಿಗಳ ಗಮನಕ್ಕೆ ತಂದಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ.ನಿರಂತರವಾಗಿ ಹಾನಿ ಮಾಡುತ್ತಿರುವ  ಆನೆ ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ  ಯಾವುದೇ ಕ್ರಮ ಕೈಗೊಳ್ಳದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಮೂಲಗಳ ಪ್ರಕಾರ ಸೆ.29 ರ ಭಾನುವಾರ ಬೆಳ್ಳೂರು ಗ್ರಾಮದಲ್ಲಿರುವ ಐಬಿ ಯಲ್ಲಿ ರೈತರ ಸಭೆಯನ್ನು ಕರೆಯಲಾಗಿದ್ದು ಅರಣ್ಯಾಧಿಕಾರಿಗಳ ವಿರುದ್ದ ರೈತರು ರಸ್ತೆಗಿಳಿದು ಪ್ರತಿಭಟಿಸುವ ಲಕ್ಷಣಗಳು ಗೋಚರಿಸುತ್ತಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.