ಅರಣ್ಯಾಧಿಕಾರಿಗಳ ವಿರುದ್ದ ಭುಗಿಲೆದ್ದ ಭಾರಿ ಆಕ್ರೋಶ – ಶಾಸಕ ಬೇಳೂರು ಮಧ್ಯಸ್ತಿಕೆಯಿಂದ ಸಂಧಾನ
ಅರಣ್ಯ ಇಲಾಖೆಯಿಂದ ಒತ್ತುವರಿ ತೆರವಿಗೆ ನೋಟಿಸ್ ನೀಡಿ ಕಿರುಕುಳ ನೀಡುವುದರೊಂದಿಗೆ ಅರಣ್ಯಾಧಿಕಾರಿಗಳು ಮುಳುಗಡೆ ಸಂತ್ರಸ್ಥರ ಮೇಲೆ ದಬ್ಬಾಳಿಕೆ ನಡೆಸುತಿದ್ದಾರೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬುಕ್ಕಿವರೆ ಗ್ರಾಮದಲ್ಲಿ ನಡೆದಿದೆ.
ಬುಕ್ಕಿವರೆ ಗ್ರಾಮದ ಹೆಬ್ಬಳಿ ಶಾಲೆಯಲ್ಲಿ ನಡೆದ ಅರಣ್ಯ ಸಮಿತಿ ಸಭೆಯಲ್ಲಿ ಕರ್ನಾಟಕ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಬೇಳೂರು ಗೋಪಾಲಕೃಷ್ಣ ಸಮ್ಮುಖದಲ್ಲಿ ಗ್ರಾಮಸ್ಥರು ಸ್ಥಳೀಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದ ಶಾಸಕ ಬೇಳೂರು ಅರಣ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಭೂಮಿ ಹಕ್ಕಿಗಾಗಿ ಹೋರಾಟ ಮಾಡುತ್ತಿರುವ ಮುಳುಗಡೆ ಸಂತ್ರಸ್ಥರೊಂದಿಗೆ ಸಂಘರ್ಷಕ್ಕೆ ಇಳಿಯದೆ ಅವರೊಂದಿಗೆ ಸೌಹಾರ್ದಯುತವಾಗಿ ನಡೆದುಕೊಳ್ಳುವಂತೆ ಸೂಚಿಸಿ ,ಹಳೆಯ ಒತ್ತುವರಿಯನ್ನು ಹೊರತುಪಡಿಸಿ ಹೊಸದಾಗಿ ಅರಣ್ಯ ನಾಶಕ್ಕೆ ಮುಂದಾಗದಂತೆ ಗ್ರಾಮಸ್ಥರಿಗೆ ಖಡಕ್ ವಾರ್ನಿಂಗ್ ನೀಡಿದರು.
ಗ್ರಾಮಸ್ಥರು ಅಹವಾಲು ಸಲ್ಲಿಸುವ ವೇಳೆಯಲ್ಲಿ ಮೂಗೂಡ್ತಿ ವನ್ಯಜೀವಿ ವಲಯದ ಅರಣ್ಯ ಸಿಬ್ಬಂದಿ ಪಾಂಡುರಂಗ ರವರ ಮೇಲೆ ಗ್ರಾಮಸ್ಥರು ಮುಗಿಬಿದ್ದು ಆರೋಪ ಮಾಡುತ್ತಿರುವಾಗ ಶಾಸಕರ ಸಮ್ಮುಖದಲ್ಲಿಯೇ ಅರಣ್ಯ ಸಿಬ್ಬಂದಿ ಗ್ರಾಮಸ್ಥರಿಗೆ ಏರುಧ್ವನಿಯಲ್ಲಿ ಮಾತನಾಡಿದ್ದು ಶಾಸಕರ ಗಮನಿಸಿ ಗ್ರಾಮಸ್ಥರೊಂದಿಗೆ ಸೌಮ್ಯವಾಗಿ ವರ್ತಿಸುವಂತೆ ಸಿಬ್ಬಂದಿಗೆ ವಾರ್ನಿಂಗ್ ನೀಡಿದ ಪ್ರಸಂಗ ನಡೆಯಿತು.
ಅರಣ್ಯ ಇಲಾಖೆಗೆ ನಮ್ಮ ಜೀವನಕ್ಕಿಂತ ಭೂಮಿಯೇ ಮುಖ್ಯವಾಗಿದ್ದರೆ ನಮ್ಮನೆಲ್ಲಾ ಸಾಮೂಹಿಕ ಹತ್ಯೆ ಮಾಡಿಬಿಡಿ ಎಂದು ಮುಳುಗಡೆ ಸಂತ್ರಸ್ಥರೊಬ್ಬರು ತಮ್ಮ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗವೂ ನಡೆಯಿತು.
ಗ್ರಾಮಸ್ಥರ ಅಹವಾಲುಗಳನ್ನು ಸ್ವೀಕರಿಸಿ ನಂತರ ಮಾತನಾಡಿದ ಶಾಸಕ ಬೇಳೂರು ಭೂ ಹಕ್ಕು ಕೊಡಿಸುವ ನಿಟ್ಟಿನಲ್ಲಿ ನಾನು ಮತ್ತು ಸಚಿವ ಮಧುಬಂಗಾರಪ್ಪ ಈಗಾಗಲೇ ನಾಲ್ಕೈದು ಬಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು ನ್ಯಾಯಲಯದಲ್ಲಿ ಖಾಸಗಿ ವಕೀಲರನ್ನು ಸಹ ನೇಮಿಸಿದ್ದೇವೆ. ಪ್ರಸ್ತುತ ನೀವು ವಾಸವಿರುವ ಜಾಗವನ್ನು ಒತ್ತುವರಿ ಮಾಡಲು ನಾವು ಅವಕಾಶ ನೀಡುವುದಿಲ್ಲ ಹೊಸದಾಗಿ ಅರಣ್ಯ ನಾಶಕ್ಕೆ ಮುಂದಾಗಬೇಡಿ ಎಂದು ಹೇಳಿ ಅರಣ್ಯಾಧಿಕಾರಿಗಳು ಈ ಭಾಗದಲ್ಲಿ ಯಾವುದೇ ರೈತರಿಗೂ ಹೊಸದಾಗಿ ನೋಟೀಸ್ ಜಾರಿ ಮಾಡದಂತೆ ವನ್ಯಜೀವಿ ವಲಯದ DFO ರವರಿಗೆ ಸೂಚನೆ ನೀಡಿದರು.
ಈ ಸಂಧರ್ಭದಲ್ಲಿ ಶಿವಮೊಗ್ಗ ವನ್ಯಜೀವಿ ವಲಯದ DFO ಪ್ರಸನ್ನ ಕೃಷ್ಣ ಪಟಗಾರ್ , ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ , ಜಿಪಂ ಮಾಜಿ ಸದಸ್ಯ ಬಿ ಪಿ ರಾಮಚಂದ್ರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಬಿ ಜಿ ಚಂದ್ರಮೌಳಿ ಮುಖಂಡರಾದ ಉಮಾಕರ್ ಕಾನುಗೋಡು ,ಬೆಳ್ಳೂರು ಯೋಗೀಶ್ ,ಮಧುಸೂಧನ್, ಮಹೇಂದ್ರ ಬುಕ್ಕಿವರೆ ,ಪ್ರವೀಣ್ ಲಕ್ಷ್ಮಿಕಾಂತ್ ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ,ಪಿಎಸ್‌ಐ ಪ್ರವೀಣ್ ಎಸ್ ಪಿ , ಕಂದಾಯ ಇಲಾಖೆಯ ಸೈಯದ್ ಅಫ಼್ರೋಜ್ ,ಸ್ಥಳೀಯ ಅರಣ್ಯಾಧಿಕಾರಿಗಳು ಇದ್ದರು.