ವಿಐಎಸ್ಎಲ್ ಪುನಶ್ಚೇತನಕ್ಕೆ 15 ಸಾವಿರ ಕೋಟಿ ಅಗತ್ಯವಿದೆ – ಹೆಚ್ ಡಿಕೆ
ಶಿವಮೊಗ್ಗ : ಭದ್ರಾವತಿಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ (ವಿಐಎಸ್‌ಎಲ್) ಕಷ್ಟವಾದರೂ ಉಳಿಸುತ್ತೇನೆ. ಕಾರ್ಮಿಕರ ಹಿತದೃಷ್ಟಿಯಿಂದ ಮತ್ತು ವಿಶ್ವೇಶ್ವರಯ್ಯನವರ ಹೆಸರು ಉಳಿಸಲು ವಿಐಎಸ್‍ಎಲ್ ಪುನರುಜ್ಜೀವನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ವಿಐಎಸ್‌ಎಲ್ ಮುಚ್ಚಬೇಕೆಂಬ ತೀರ್ಮಾನಕ್ಕೆ ಬರಲಾಗಿತ್ತು. ಸಾವಿರಾರು ಕುಟುಂಬಗಳಿಗೆ ಕಾರ್ಖಾನೆ ಅನ್ನ ಕೊಟ್ಟಿದೆ. ಅದನ್ನು ಉಳಿಸಲು ಎಷ್ಟು ಹೋರಾಟ ಮಾಡುತ್ತಿದ್ದೇನೆ ಎಂಬುದು ನನಗೆ ಮಾತ್ರ ಗೊತ್ತಿದೆ. ಕಾರ್ಖಾನೆಗೆ ಜೀವ ಕೊಡುವ ಕೆಲಸ ಮಾಡುತ್ತಿದ್ದೇನೆ. ಆರ್ಥಿಕ ಏರಿಳಿತ ಆಗಿರುವ ಕಂಪನಿಗಳನ್ನು ಖಾಸಗಿತನಕ್ಕೆ ಒಪ್ಪಿಸಬೇಕೆಂಬ ತೀರ್ಮಾನ ಆಗಿದೆ. ಬಂಡವಾಳ ಹೂಡಿಕೆ ಮಾಡಿದಂತೆ ನಿರ್ಧರಿಸಲಾಗಿದೆ. ಆದರೂ ವಿಐಎಸ್‌ಎಲ್ ಉಳಿಸುವುದಕ್ಕೆ ಎಲ್ಲ ರೀತಿಯ ಪ್ರಯತ್ನವನ್ನು ಮಾಡುತ್ತಿದ್ದೇನೆ ಎಂದು ಹೇಳಿದರು.
ವಿಶಾಖಪಟ್ಟಣದ ರಾಷ್ಟ್ರೀಯ ಇಸ್ಪಾತ್ ನಿಗಮ್(ಆರ್‌ಎನ್‌ಐಎಲ್) ಕಾರ್ಖಾನೆಯ ಪರಿಸ್ಥಿತಿಯೂ ವಿಐಎಸ್‌ಎಲ್‌ಗೆ ಭಿನ್ನವಾಗಿಲ್ಲ. ಲಾಭದಲ್ಲಿದ್ದ ಆ ಕಾರ್ಖಾನೆ ಇಂದು ನಷ್ಟದಲ್ಲಿದೆ. ಅದರ ಅಭಿವೃದ್ಧಿಗೆ 35 ಸಾವಿರ ಕೋಟಿ ರೂ. ಅಗತ್ಯವಿದೆ. ಅದೇ ರೀತಿ ವಿಐಎಸ್‌ಎಲ್ಗೆ ಕನಿಷ್ಠ 15 ಸಾವಿರ ಕೋಟಿ ರೂ. ಅಗತ್ಯವಿದೆ. ಕಾರ್ಖಾನೆ ಅಭಿವೃದ್ಧಿ ವಿಷಯದಲ್ಲಿ ನಾನು ಪ್ರವಾಹದ ವಿರುದ್ಧ ಈಜಬೇಕಿದೆ ಎಂದರು.
ಬೃಹತ್ ಕೈಗಾರಿಕೆ ಇಲಾಖೆಯಲ್ಲಿ ದೊಡ್ಡಮಟ್ಟದ ಅನುದಾನ ಒದಗಿಸುವ ಅವಕಾಶವಿಲ್ಲ. ಯಾವುದೇ ಯೋಜನೆಗಳಿದ್ದರೂ ಅದನ್ನು ಸಚಿವ ಸಂಪುಟದಲ್ಲಿಟ್ಟು ಹಣಕಾಸು ಇಲಾಖೆಗೆ ಶಿಫಾರಸು ಮಾಡಬಹುದು. ಇಡೀ ಘಟಕವನ್ನೇ ಮರು ನಿರ್ಮಾಣ ಮಾಡಬೇಕಿದೆ. ಸೈಲ್(ಭಾರತೀಯ ಉಕ್ಕು ಪ್ರಾಧಿಕಾರ)ನಿಂದ ಕಾರ್ಖಾನೆಗೆ ಜೀವ ತುಂಬಬೇಕಿದೆ. ಸ್ವಲ್ಪ ಸಮಯವನ್ನು ತೆಗೆದುಕೊಳ್ಳಲಿದೆ. ಹಾಗಾಗಿ ಕಾರ್ಮಿರು ಹಾಗೂ ಸಾರ್ವಜನಿಕರಿಗೆ ಈ ಬಗ್ಗೆ ಗೊಂದಲ, ಅನುಮಾನಗಳು ಬೇಡ ಎಂದು ಹೇಳಿದರು.
ಆಡಳಿತ ಯಂತ್ರದ ಮೇಲೆ ಪರಿಣಾಮ: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವು ಆಡಳಿತ ಯಂತ್ರದ ಮೇಲೆ ಪರಿಣಾಮ ಬೀರುತ್ತಿದೆ. ಕಾಂಗ್ರೆಸ್‌ನಲ್ಲೇ ಸಿಎಂ ಸ್ಥಾನಕ್ಕೆ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಅವರ ಪಕ್ಷದ ನಡುವಳಿಕೆ ನಮಗೆ ಗೊತ್ತಿಲ್ಲ. ಸಿಎಂ ಬದಲಾವಣೆ ಬಗ್ಗೆ ಅವರೇ ಮಾತನಾಡಿಕೊಳ್ಳುತ್ತಿದ್ದಾರೆ. ಇದು ಆಡಳಿತ ನಿಯಂತ್ರಣ ಮೇಲೆ ಪರಿಣಾಮ ಬೀರುತ್ತಿದೆ. ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಆಗುತ್ತಿಲ್ಲ. ಪ್ರತಿನಿತ್ಯ ಇದೇ ರೀತಿ ಮುಂದುವರಿದರೆ ಅಧಿಕಾರಿಗಳು ಮಾತು ಕೇಳುವುದಿಲ್ಲ ಎಂದು ಎಚ್‌ಡಿಕೆ ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಅಭಿವೃದ್ಧಿ ವಿಷಯಕ್ಕಿಂತ ಬೇರೆಯದ್ದೇ ವಿಷಯಗಳ ಬಗ್ಗೆ ಬರ್ಚೆ ಆಗುತ್ತಿದೆ. ಹಲವಾರು ಯೋಜನೆಯ ಜಾರಿಯಲ್ಲಿ ಲೋಪದೋಷಗಳಿವೆ. ಇಂತಹ ಪರಿಸ್ಥಿತಿ ಹಿಂದೆಂದೂ ಇರಲಿಲ್ಲ. ಆಡಳಿತ ಪಕ್ಷದ ಕೊನೆಯಲ್ಲಿ ಅದರ ಬಗ್ಗೆ ಟೀಕೆ ಟಿಪ್ಪಣಿ ಸಹಜ. ಆದರೆ ಈ ಸರ್ಕಾರ ಅಧಿಕಾರಕ್ಕೆ ಬಂದು ಮೊದಲ ವರ್ಷ ಕಳೆಯುವ ಮೊದಲೇ ಭ್ರಷ್ಟಾಚಾರದ ಆರೋಪ ಕೇಳಿ ಬರುತ್ತಿದೆ. ಹಿಂದಿನ ಸರ್ಕಾರದ ಮೇಲೆ ಕೇಳಿಬರುತ್ತಿದ್ದ ಶೇ.40ಗಿಂತ ಹೆಚ್ಚು ಭ್ರಷ್ಟಾಚಾರ ಈಗ ನಡೆಯುತ್ತಿದೆ ಎಂದು ಕಾಂಗ್ರೆಸ್‌ನವರೇ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂಧರ್ಭದಲ್ಲಿ ಶಾಸಕಿ ಶಾರದಾ ಪೂರ್ಯನಾಯಕ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಜಿಲ್ಲಾಧ್ಯಕ್ಷ ಕಡಿದಾಲ್ ಗೋಪಾಲ್, ಪ್ರಮುಖರಾದ ಶಾರದಾ ಅಪ್ಪಾಜಿಗೌಡ , ಅರ್ ಎ ಚಾಬುಸಾಬ್ , ಆಯನೂರು ಶಿವನಾಯ್ಕ್ ಮತ್ತಿತರರು ಇದ್ದರು.