Ripponpete | ವಯನಾಡು ಜಲದುರಂತ – ಕ್ರೀಡಾ ವೇತನವನ್ನು ದೇಣಿಗೆಯಾಗಿ ನೀಡಿದ ರಾಷ್ಟ್ರೀಯ ಕಬ್ಬಡಿ ಆಟಗಾರ್ತಿ ರಿಪ್ಪನ್‌ಪೇಟೆಯ ಶ್ರೇಯಾ |
ಕೇರಳದ ವಯನಾಡಿನಲ್ಲಿ ಹಿಂದೆಂದೂ ಕಂಡು ಕೇಳರಿಯದಂತಹ ಭೂಕುಸಿತ ಉಂಟಾಗಿದೆ. ಹಳ್ಳಿಗಳಿಗೆ ಹಳ್ಳಿಗಳೇ ನಾಮಾವಶೇಷವಾಗಿವೆ! ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮಣ್ಣಿನಡಿಯಲ್ಲಿ ಇನ್ನೂ ಅದೆಷ್ಟು ಮಂದಿ ಹುದುಗಿದ್ದಾರೋ, ಗೊತ್ತಿಲ್ಲ. ಎಡೆಬಿಡದೇ ಧಾರಕಾರವಾಗಿ ಸುರಿಯುತ್ತಿರುವ ಮಳೆಯಲ್ಲೇ ರಕ್ಷಣಾ ತಂಡಗಳು ಕಾರ್ಯಾಚರಣೆಯಲ್ಲಿ ಮಗ್ನವಾಗಿವೆ.ಹಲವಾರು ಉದ್ಯಮಿಗಳು ಈಗಾಗಲೇ ನೆರವು ನೀಡುವುದಾಗಿ ಘೋಷಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದ ರಾಮಕೃಷ್ಣ ಶಿಕ್ಷಣ ಸಂಸ್ಥೆಯ 09 ನೇ ತರಗತಿಯ ವಿದ್ಯಾರ್ಥಿನಿ ಶ್ರೇಯಾ ವಯನಾಡು ಜಲ ದುರಂತದ ಸಂತ್ರಸ್ಥರಿಗೆ ತನಗೆ ದೊರೆತ ಕ್ರೀಡಾ ವೇತನ 10 ಸಾವಿರ ರೂ ಹಣವನ್ನು ತಹಶೀಲ್ದಾರ್ ರಶ್ಮಿ ಹಾಲೇಶ್ ಮುಖಾಂತರ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾಳೆ..
ಪಟ್ಟಣದ ರಾಮಕೃಷ್ಣ ಶಿಕ್ಷಣ ಸಂಸ್ಥೆಯಲ್ಲಿ 9 ನೇ ತರಗತಿ ವ್ಯಾಸಾಂಗ ಮಾಡುತ್ತಿರುವ ಶ್ರೇಯಾ 14 ವರ್ಷ ವಯೋಮಿತಿಯೊಳಗಿನ ರಾಷ್ಟ್ರೀಯ ಕಬ್ಬಡಿಯಲ್ಲಿ ರಾಜ್ಯ ತಂಡದಿಂದ ರಾಷ್ಟ್ರ ಮಟ್ಟದ ಕಬ್ಬಡಿ ತಂಡಕ್ಕೆ ಆಯ್ಕೆಯಾಗಿ ಅದ್ಭುತ ಪ್ರದರ್ಶನ ನೀಡಿದ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ ನೀಡಿದ ಹತ್ತು ಸಾವಿರ ರೂಪಾಯಿಗಳ ಕ್ರೀಡಾ ವೇತನವನ್ನು ಪಡೆದಿದ್ದಳು.
ಕೇರಳದ ವಯನಾಡುವಿನಲ್ಲಿ ಸಂಭವಿಸಿದ ಜಲದುರಂತವನ್ನು ಮಾದ್ಯಮಗಳಲ್ಲಿ ನೋಡಿ ಮನಕರಗಿ ತನಗೆ ದೊರೆತ ಕ್ರೀಡಾ ವೇತನವನ್ನು ದುರಂತದ ಸಂತ್ರಸ್ಥರಿಗೆ ನೀಡಲು ನಿರ್ಧರಿಸಿ ತನ್ನ ಪೋಷಕರಿಗೆ ತಿಳಿಸಿದ ಹಿನ್ನಲೆಯಲ್ಲಿ ಪೋಷಕರಾದ ರಾಘವೇಂದ್ರ ಹಾಗೂ ಸವಿತಾ ದಂಪತಿಗಳು ಮಾಹಿತಿಯನ್ನು ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಎಸ್ ಪಿ ಹಾಗೂ ನಮ್ಮ ಪೋಸ್ಟ್ ಮ್ಯಾನ್ ನ್ಯೂಸ್ ಗಮನಕ್ಕೆ ತಂದ ಹಿನ್ನಲೆಯಲ್ಲಿ ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್ ರವರಿಗೆ ಮಾಹಿತಿ ತಿಳಿಸಿದಾಗ ಅವರು ಈ ವಿದ್ಯಾರ್ಥಿನಿಯ ಮಾನವೀಯತೆಯ ಗುಣವನ್ನು ಮೆಚ್ಚಿ ಸ್ವತಃ ತಾವೇ ಖುದ್ದಾಗಿ ರಿಪ್ಪನ್‌ಪೇಟೆ ನಾಡಕಛೇರಿಗೆ ಆಗಮಿಸಿ ದೇಣಿಗೆಯನ್ನು ಸರ್ಕಾರದ ಪರವಾಗಿ ಪಡೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಇಂದು ಸಂಜೆ ರಿಪ್ಪನ್‌ಪೇಟೆಯ ನಾಡ ಕಛೇರಿಯಲ್ಲಿ ಶ್ರೇಯಾ ಹಾಗೂ ಕುಟುಂಬಸ್ಥರಿಂದ ವಯನಾಡು ಸಂತ್ರಸ್ಥರ ಪರಿಹಾರ ನಿಧಿಗೆ ದೇಣಿಗೆಯನ್ನು ತಹಶೀಲ್ದಾರ್ ರಶ್ಮಿ ಹಾಲೇಶ್ ಸ್ವೀಕರಿಸಿ ನಂತರ ಮಾತನಾಡಿ ವಯನಾಡು ದುರಂತ ಸಂತ್ರಸ್ಥರಿಗೆ ತನ್ನ ಕ್ರೀಡಾ ವೇತನ 10 ಸಾವಿರ ರೂ ವನ್ನು ದೇಣಿಗೆಯಾಗಿ ನೀಡುವ ಮೂಲಕ ವಿದ್ಯಾರ್ಥಿನಿ ಶ್ರೇಯಾ ಎಲ್ಲರಿಗೂ ಮಾದರಿಯಾಗಿದ್ದಾಳೆ ಎಂದು ಅಭಿನಂದನೆಯನ್ನು ಸಲ್ಲಿಸಿದರು.
ಶ್ರೇಯಾ ತನ್ನ ವಿದ್ಯಾರ್ಥಿ ವೇತನವನ್ನು ಸಂತಸ್ಥರಿಗೆ ದೇಣಿಗೆ ನೀಡಿರುವುದರಿಂದ ಪ್ರೇರಣೆಗೊಂಡ ವಿದ್ಯಾರ್ಥಿನಿಯ ಸಹೋದರ ಶ್ರವಂತ್ ಕೂಡ ತನ್ನ ಪೋಷಕರು ನೀಡಿದ ಹಣದಲ್ಲಿ ಉಳಿತಾಯ ಮಾಡಿದ ಐದು ಸಾವಿರ ರೂಪಾಯಿ ಯನ್ನು ಇದೇ ಸಂಧರ್ಭದಲ್ಲಿ ವಯನಾಡು ಸಂತ್ರಸ್ಥ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾನೆ.
ಈ ಸಂದರ್ಭದಲ್ಲಿ ಪಿಎಸ್‌ಐ ಪ್ರವೀಣ್ ಎಸ್ ಪಿ, ಉಪ ತಹಶೀಲ್ದಾರ್ ಹುಚ್ಚರಾಯಪ್ಪ,ವಿದ್ಯಾರ್ಥಿನಿಯ ತರಬೇತುದಾರ ವಿನಯ್ ಕುಮಾರ್ , ಕಂದಾಯ ಇಲಾಖೆಯ ಸೈಯದ್ ಅಪ್ರೋಜ್, ಮಂಜುನಾಥ, ರಾಘವೇಂದ್ರ ಇನ್ನಿತರರಿದ್ದರು.