ಉತ್ತಮ ಆರೋಗ್ಯವೆನ್ನುವುದು ಶ್ರೀಮಂತರಿಗೆ ಮಾತ್ರ ಸೀಮಿತವೇ.!?
ನಾನೊಬ್ಬ ಮಾಧ್ಯಮ ವರ್ಗದ ಸಾಮಾನ್ಯ ಗೃಹಿಣಿ ಯಾಗಿದ್ದು ನನ್ನ ಕೆಲಸ ಪ್ರತಿದಿನ ನನ್ನ ಕುಟುಂಬ ಆರೋಗ್ಯವಂತವಾಗಿ ಮತ್ತು ಸಂತೋಷದಿಂದ ಇರುವಂತೆ ನೋಡಿಕೊಳ್ಳುವುದು. ಅದಕ್ಕಾಗಿ ನಾನು ಪ್ರತಿ ಗಳಿಗೆಯು ಶ್ರಮಿಸುತ್ತಿರುತ್ತೇನೆ.ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಉತ್ತರವೇ ಸಿಗದ ಪ್ರಶ್ನೆಗಳು ನನ್ನನ್ನು ಸದಾ ಕಾಡುತ್ತಿರುತ್ತವೆ.
ಪ್ರತಿಯೊಬ್ಬರಿಗೂ ಒಳ್ಳೆಯ ಆರೋಗ್ಯ ಸಿಗಬೇಕೆಂದರೆ, ಒಳ್ಳೆಯ ಆಹಾರವೇ ಪ್ರಥಮ ಆದ್ಯತೆ. ಇದನ್ನು ಆಯುರ್ವೇದ ಗ್ರಂಥಗಳಲ್ಲೂ ಉಲ್ಲೆಖಿಸಿದ್ದಾರೆ.
ಈ ಹಿನ್ನಲೆಯಲ್ಲಿ ನನ್ನ ಕುಟುಂಬದ ಉತ್ತಮ ಆರೋಗ್ಯಕ್ಕಾಗಿ ಹೊರಗಿನ ತಿಂಡಿ ತಿನಿಸುಗಳನ್ನು ತರಿಸದೇ ಮನೆಯಲ್ಲೇ ಶುದ್ಧವಾಗಿ ತಿಂಡಿಗಳನ್ನು ತಯಾರಿಸುತ್ತಿರುತ್ತೇನೆ ಮಕ್ಕಳಿಗೆ ಇಷ್ಟವಾಗುವ ತಿನಿಸುಗಳನ್ನ ಯೂಟ್ಯೂಬ್ ನಲ್ಲಿ ನೋಡಿ ಮಾಡುತ್ತಿರುತ್ತೇನೆ. ಅದರಲ್ಲೂ ಒಂದು ಹೆಜ್ಜೆ ಮುಂದೆ ಹೋಗಿ ಆರೋಗ್ಯಯುತ ಮಾದರಿಯನ್ನು ಹುಡುಕುತ್ತಿರುತ್ತೇನೆ.
ಉದಾಹರಣೆಗೆ ಕರಿಯುವ ಪದಾರ್ಥಗಳಿಗೆ ಯಾವ ಅಡುಗೆ ಎಣ್ಣೆ ಬಳಸಿದರೆ ಉತ್ತಮ ಎಂದೆಲ್ಲ, ಅದಕ್ಕಾಗಿ ಈಗ ನಾನು ರೀಫೈಂಡ್ ಆಯಿಲ್ ಬಿಟ್ಟು ಕಡಲೆ ಬೀಜದ ಎಣ್ಣೆಗೆ ಬದಲಾಗಿದ್ದೇನೆ. ಹೀಗೆ ಬದಲಾಗುತ್ತಾ ಹೋದಂತೆಲ್ಲಾ ಅವುಗಳ ಬೆಲೆಯಲ್ಲೂ ತುಂಬಾ ವ್ಯತ್ಯಾಸಗಳು ಸಿಗುತ್ತವೆ.ಅಡಿಗೆ ಎಣ್ಣೆಯ ಬೆಲೆ ಕಡಿಮೆ ಎಂದರೆ 180 ರೂ ಹಾಗೂ ಹೆಲ್ದಿ ಎಣ್ಣೆಗೆ 350 ರೂ ಇದೆ , ಅಡಿಗೆಗೆ ಬಳಸುವ ಉಪ್ಪು 25 ರೂ ಗೆ ಸಿಗುತ್ತದೆ ಹೆಲ್ದಿ ಉಪ್ಪು ಬೇಕಾದರೇ ಪಾವತಿಸಬೇಕು, ಇನ್ನೂ ಸಕ್ಕರೆ kg ಗೆ 50 ಕ್ಕೆ ಸಿಗುತ್ತದೆ ಹೆಲ್ದಿ ಸಕ್ಕರೆ ಬೇಕಾದರೇ 150 ರೂ , ಬೆಲ್ಲ kg ಗೆ 50 ಹೆಲ್ದಿ ಬೆಲ್ಲಕ್ಕೆ 100 ರೂ ತೆರಬೇಕಾಗುತ್ತದೆ.ಇದು ಕೇವಲ ದಿನಸಿ ಪದ್ಧರ್ಥಗಳಿಗೆ ಸೀಮಿತವಲ್ಲ ಹಣ್ಣು,ತರಕಾರಿ , ಸೊಪ್ಪುಗಳ ದರದಲ್ಲೂ ಇದೆ ಪರಿಸ್ಥಿತಿ. ಆರ್ಗಾನಿಕ್(organic) ಆಗಿ ಬೆಳೆದಿದ್ದು ಜಾಸ್ತಿ ಬೆಲೆ, ಕಲಬೆರಕೆ ಆಗಿರೋದು ಕಡಿಮೆ ಬೆಲೆ.
ಖಾದ್ಯ ತೈಲ್ಯದ ಜತೆಗೆ ಖನಿಜ ತೈಲ ಸೇರಿಸುವುದರಿಂದ ಕ್ಯಾನ್ಸರ್ ಅಪಾಯ ಇರುತ್ತದೆ.ಸೀಸದ ಕ್ರೋಮೇಟ್‌ಅನ್ನು ಅರಿಶಿಣಪುಡಿ ಮತ್ತು ಮಸಾಲೆ ಪದಾರ್ಥಗಳಿಗೆ ಸೇರಿಸಲಾಗುತ್ತದೆ. ಇದು ರಕ್ತಹೀನತೆ, ಪಾರ್ಶ್ವವಾಯು, ಮೆದುಳಿನ ಹಾನಿ, ಗರ್ಭಪಾತಕ್ಕೆ ಕಾರಣವಾಗಬಹುದು. ನೀರಿಗೆ ಸೀಸ ಸೇರಿಸಿದರೆ ನಿದ್ರಾಹೀನತೆ, ಮಲಬದ್ಧತೆ, ರಕ್ತಹೀನತೆ ಮತ್ತು ಮಾನಸಿಕ ಸಮಸ್ಯೆ ತಲೆದೋರಬಹುದು.ನೀರು ಮತ್ತು ಮದ್ಯಸಾರಕ್ಕೆ ಕೋಬಾಲ್ಟ್ ಸೇರಿಸಿದರೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಳ್ಳಬಹುದು. ಪಾದರಸದಿಂದ ಪಾರ್ಶ್ವವಾಯು ಜತೆಗೆಮೆದುಳಿಗೆ ಹಾನಿ ಉಂಟಾಗಬಹುದು ಎನ್ನುತ್ತಾರೆ ವೈದ್ಯರು.
ಕಲಬೆರಕೆ ಇಲ್ಲದ ಅಡುಗೆ ಎಣ್ಣೆ ಖರೀದಿಸಲು ಹೋದರೆ ಬೆಲೆ ಜಾಸ್ತಿ ನಮ್ಮ ತಿಂಗಳ ಬಜೆಟ್ ಮೀರಿ ಹೋಗುವಂತದ್ದು, ಬೆಲೆ ಜಾಸ್ತಿ ಅಂತ ಕೈ ಬಿಟ್ಟರೆ, ಆರೋಗ್ಯ ಸಮಸ್ಯೆ ಕಾಡುವುದೇನೋ ಅನ್ನುವ ಭಯ. ಈಗ ನೀವ್ ಹೇಳಬಹುದು ಇನ್ಶೂರೆನ್ಸ್ ಇದೆಯಲ್ಲಾ ಅಂತ ದುಡಿದ ದುಡ್ಡೆಲ್ಲಾ ಇನ್ಶೂರೆನ್ಸ್ ಗೆ ಹಾಕಿದರೆ ಹೇಗೆ ? ಇರಲಿ ಮಾಡಿಸೋಣ ಅಂತ ಇನ್ಶೂರೆನ್ಸ್ ಮಾಡಿಸಿದರೆ ಕಾಯಿಲೆ ಬಂದಾಗ ಕ್ಲೇಮ್ ಮಾಡುತ್ತಾರೆ ಹೊರತು ಖಾಯಿಲೆ ಅನುಭವಿಸೋರು ನಾವೇ ತಾನೇ..!?
ಇದನ್ನೆಲ್ಲಾ ನೋಡಿದಾಗ ನನಗೆ ಕಾಡುವ ಕೊನೆಯ ಪ್ರಶ್ನೆ ಉತ್ತಮ ಆರೋಗ್ಯ ಅನ್ನುವುದು ಶ್ರೀಮಂತರಿಗೆ ಮಾತ್ರಾನಾ!!?? ಬಡವ ಕಲಬೆರಕೆ ಆಹಾರ ಸೇವಿಸಿ ಸಾಯಬೇಕಾ..!??
ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಆಹಾರ ಸಾಮಾಗ್ರಿಗಳಲ್ಲಿ ಮಾಡುವ ಕಲಬೆರಕೆಯನ್ನು ನಿಲ್ಲಿಸಲು ಕಠಿಣ ಕಾನೂನು ತರಬೇಕು ಮತ್ತು ಕಲಬೆರಕೆ ಇಲ್ಲದ ಆಹಾರ ಸಾಮಾಗ್ರಿಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಿದರೆ ಅವು ಎಲ್ಲಾ ವರ್ಗದ ಜನರಿಗೂ ಸಿಗಬಹುದೇನೋ , ಬಡವರು ಕೂಡಾ ಅಲ್ಪಸ್ವಲ್ಪ ಆರೋಗ್ಯವಂತವರಾಗುತ್ತಾರೆ ಎನ್ನುವ ಸಣ್ಣ ಭರವಸೆ ಅಷ್ಟೇ….
– ಸಂಗೀತ ಎಂ ಎನ್
ರಿಪ್ಪನಪೇಟೆ