RIPPONPETE | ಗಣೇಶೋತ್ಸವ ಹಾಗೂ ಈದ್ ಮಿಲಾದ್ ಅಂಗವಾಗಿ ಶಾಂತಿಸಭೆ
ಕಾನೂನು ಪಾಲನೆಗೆ ಕರೆಯಬೇಡಿ ಹಬ್ಬಕ್ಕೆ ಕರೆಯಿರಿ – ತಹಶೀಲ್ದಾರ್ ರಶ್ಮಿ ಹಾಲೇಶ್
ರಿಪ್ಪನ್‌ಪೇಟೆ : ಜಾತಿ ಮತ ಪಂಥಗಳ ಭೇಧವನ್ನು ಮರೆತು ಸಧ್ಭಾವನೆಯಿಂದ ಎಲ್ಲರಲ್ಲೂ ಬೆರೆತು ಹಬ್ಬವನ್ನು ಆಚರಿಸಿದಾಗ ಅದು ನಾಡಹಬ್ಬವಾಗುತ್ತದೆ ಎಂದು ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್ ಹೇಳಿದರು.
ಇಲ್ಲಿನ ಗ್ರಾಮ ಪಂಚಾಯಿತಿಯ ಕುವೆಂಪು ಸಭಾಭವನದಲ್ಲಿ ಪೊಲೀಸ್, ಕಂದಾಯ ಇಲಾಖೆಯವರು ಆಯೋಜಿಸಲಾದ “ಗೌರಿ-ಗಣೇಶ ಮತ್ತು ಈದ್ ಮಿಲಾದ್’’ ಹಬ್ಬದ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗೌರಿ-ಗಣೇಶ ಮತ್ತು ಈದ್ ಮಿಲಾದ್ ಹಬ್ಬ ಆಚರಣೆಯ ವೈಯಕ್ತಿಕ ವಿಚಾರವನ್ನು ತಂದು ಅಶಾಂತಿ ಸೃಷ್ಟಿಸುವವರ ವಿರುದ್ಧ ಮುಲಾಜಿಲ್ಲದೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಿದರು.
ಗೌರಿ – ಗಣೇಶ ಹಾಗೂ ಈ ಹಬ್ಬವನ್ನು ಸಂಭ್ರಮದೊಂದಿಗೆ ಎಲ್ಲರೂ ಒಂದುಗೂಡಿ ಸಂಭ್ರಮದಿಂದ ಆಚರಿಸಿ ನಮ್ಮನ್ನು ನಿಮ್ಮ ಊರಿಗೆ ಕಾನೂನು ಪಾಲನೆಗೆ ಕರೆಯಬೇಡಿ ‘ಹಬ್ಬ’ಕ್ಕೆ ಕರೆಯಿರಿ ಎಂದು ಹೇಳಿ ಈ ಬಾರಿ ಗಣಪತಿ ವಿಸರ್ಜನ ಮೆರವಣಿಗೆಯಲ್ಲಿ ಮಹಿಳೆಯರು ಮತ್ತು ಯುವತಿಯರು ನೃತ್ಯ ಮಾಡುವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ಕ್ರಮವನ್ನು ಗಣಪತಿ ಸಮಿತಿಯವರು ವಹಿಸಿಕೊಳ್ಳುವಂತೆ ಸೂಚಿಸಿದರು.
ಹೊಸನಗರ ವೃತ್ತ ನಿರೀಕ್ಷಕ ಗುರಣ್ಣ ಎಸ್ ಹೆಬ್ಬಾಳ್ ಮಾತನಾಡಿ ಗೌರಿ-ಗಣೇಶ ಮತ್ತು ಈದ್ ಮಿಲಾದ್ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಊರಹಬ್ಬವನ್ನಾಗಿ ಆಚರಿಸುವಂತಾಗಬೇಕು.ಈ ಹಬ್ಬದಲ್ಲಿ ಡಿಜೆಯಂತಹ ಕರ್ಕಶವಾದ ಹೆಚ್ಚು ಸೌಂಡ್ ಮಾಡುವಂತಹ ಸ್ಪೀಕರ್ ಬಳಸುವುದರಿಂದ ಅನಾರೋಗ್ಯ ಪೀಡಿತರಿಗೆ ಅಪಾಯವಾಗುವ ಸಂಭವವೇ ಹೆಚ್ಚು. ಆದ್ದರಿಂದಾಗಿ ಡಿಜೆ ಬಳಕೆ ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಹೇಳಿದರು.
ಪಿಎಸ್ಐ ಎಸ್.ಪಿ. ಪ್ರವೀಣ್ ಪ್ರಾಸ್ತಾವಿಕವಾಗಿ ಮಾತನಾಡಿ ಸಾರ್ವಜನಿಕ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬಗಳಿಗೆ ಇರುವ ನಿಯಮಗಳ ಬಗ್ಗೆ ಸವಿವರವಾಗಿ ಹೇಳಿದರು.
ಈ ಸಭೆಯಲ್ಲಿ ಮುಖಂಡರುಗಳಾದ ಆರ್.ಎ.ಚಾಬುಸಾಬ್, ಆರ್.ಎನ್.ಮಂಜುನಾಥ, ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ ಅಧ್ಯಕ್ಷ ರಾಮಚಂದ್ರ ಬಳೆಗಾರ್, ಎಂ.ಬಿ.ಮಂಜುನಾಥ, ಎಂ.ಸುರೇಶ್ ಸಿಂಗ್, ಜುಮ್ಮಾಮಸೀದಿಯ ಅಧ್ಯಕ್ಷ ಹಸನಬ್ಬ, ಆಸೀಫ಼್ ಭಾಷಾ ,ಉಬೇದುಲ್ಲಾ ಷರೀಫ್, ನರಸಿಂಹ, ಜೆ.ಜಿ.ಸದಾನಂದ ಸಾರ್ವಜನಿಕರ ಪರವಾಗಿ ಹಲವು ಸಲಹೆಗಳನ್ನು ನೀಡಿದರು.
ಈ ಸಂಧರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ , ತಾಪಂ ಕಾರ್ಯ ನಿರ್ವಹಣಾಧಿಕಾರಿ ನರೇಂದ್ರ , ಪಿಡಿಓ ಮಧುಸೂಧನ್ , ಅಗ್ನಿಶಾಮಕ ಇಲಾಖೆ, ಪಿಡಬ್ಲೂಡಿ, ಮೆಸ್ಕಾಂ, ಕಂದಾಯ ತಾಲ್ಲೂಕು ಪಂಚಾಯತ್ ಗ್ರಾಮ ಪಂಚಾಯತ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ ವರ್ಗದವರು ಹಾಜರಿದ್ದರು.