Ripponpete | ಭಾರಿ ಮಳೆಗೆ ಕುಸಿದು ಬಿದ್ದ ಮನೆಯ ಗೋಡೆ – ಕೂದಳೆಲೆ ಅಂತರದಲ್ಲಿ ಪಾರಾದ ವೃದ್ದೆ
ಮಾನವೀಯತೆ ಮೆರೆದ ಗ್ರಾಪಂ ಬಿಲ್ ಕಲೆಕ್ಟರ್ ನಾಗೇಶ್
ರಿಪ್ಪನ್‌ಪೇಟೆ : ಪಟ್ಟಣದ ವ್ಯಾಪ್ತಿಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ವೃದ್ದೆಯೊಬ್ಬರು ವಾಸಿಸುತ್ತಿರುವ ಮನೆಯೊಂದು ಕುಸಿದು ಬಿದ್ದು ಅದೃಷ್ಟವಶಾತ್ ಭಾರಿ ಅನಾಹುತವೊಂದು ತಪ್ಪಿದೆ.
ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ಆರ್ ಆರ್ ಪಿಕಲ್ಸ್ ಮುಂಭಾಗದಲ್ಲಿ ರತ್ನಮ್ಮ ಎಂಬ ವೃದ್ದೆಯೊಬ್ಬರೆ ವಾಸಿಸುತಿದ್ದ ಮನೆ ಗೋಡೆ ತಡರಾತ್ರಿ ಕುಸಿದು ಬಿದ್ದಿದೆ.
ಗೋಡೆ ಪಕ್ಕದಲ್ಲಿಯೇ ಮಲಗಿದ್ದ ರತ್ನಮ್ಮ ಕೂದಳೆಲೆ ಅಂತರದಲ್ಲಿ ಪಾರಾಗಿದ್ದಾರೆ, ರಾತ್ರಿಯಿಡಿ ಯಾರಿಗೂ ವಿಷಯ ತಿಳಿಸದೇ ಗೋಡೆ ಕುಸಿದ ಮನೆಯ ಮೂಲೆಯಲ್ಲಿಯೇ ಮಲಗಿದ್ದಾರೆ.
ಗುರುವಾರ ಬೆಳಿಗ್ಗೆ ಅಕ್ಕಪಕ್ಕದ ಮನೆಯರಿಗೆ ವಿಷಯ ತಿಳಿದು ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದಾರೆ.ಮನೆಯ ಗೋಡೆ ಮತ್ತಷ್ಟು ಕುಸಿಯುವ ಭೀತಿಯಲ್ಲಿರುವ ರತ್ನಮ್ಮ ದಿಕ್ಕು ತೋಚದಂತಾಗಿದ್ದಾರೆ.
ವೃದ್ದೆಯ ಪರಿಸ್ಥಿತಿಯನ್ನು ಮನಗಂಡ ರಿಪ್ಪನ್‌ಪೇಟೆ ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್ ನಾಗೇಶ್ ರವರು ವೃದ್ದೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೂ ತಮ್ಮ ಮನೆಯಲ್ಲಿ ಆಶ್ರಯ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು , ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.