Breaking
12 Jan 2026, Mon

ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ರೆಡ್ ಅಲರ್ಟ್ – ಎಲ್ಲೆಲ್ಲಿ ಎಷ್ಟೆಷ್ಟು ಮಳೆ , ಇಲ್ಲಿದೆ ಮಾಹಿತಿ | Rain updates

ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ರೆಡ್ ಅಲರ್ಟ್ – ಎಲ್ಲೆಲ್ಲಿ ಎಷ್ಟೆಷ್ಟು ಮಳೆ , ಇಲ್ಲಿದೆ ಮಾಹಿತಿ

ಮಲೆನಾಡಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರಿದಿದೆ. ನಿರಂತರ ಮಳೆ ಹಾಗೂ ಬೀಸುತ್ತಿರುವ ಗಾಳಿಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಹಳ್ಳಕೊಳ್ಳ, ಕೆರೆಕಟ್ಟೆ, ನದಿಗಳು ಉಕ್ಕಿ ಹರಿಯುತ್ತಿವೆ. ಪ್ರವಾಹದ (flood) ಆತಂಕ ಸೃಷ್ಟಿಸಿವೆ. ಮತ್ತೊಂದೆಡೆ, ಇನ್ನೂ ಕೆಲ ದಿನಗಳವರೆಗೆ ಮಳೆಯ ಆರ್ಭಟ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಶನಿವಾರ ಕೂಡ ಜಿಲ್ಲೆಗೆ ರೆಡ್ ಅಲರ್ಟ್  ಘೋಷಿಸಿದೆ.

ಹೊಸನಗರ , ತೀರ್ಥಹಳ್ಳಿ , ಸಾಗರ ತಾಲೂಕು ವ್ಯಾಪ್ತಿಗಳಲ್ಲಿ ಅಕ್ಷರಶಃ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಮಾಹಿತಿಯಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಪಶ್ಚಿಮಘಟ್ಟ  ವ್ಯಾಪ್ತಿಯ ಪ್ರದೇಶಗಳಾದ ಮಾಣಿ (mani) 205 ಮಿಲಿ ಮೀಟರ್, ಯಡೂರು (yadur) 175 ಮಿ.ಮೀ., ಹುಲಿಕಲ್ (hulikall) 231 ಮಿ.ಮೀ., ಮಾಸ್ತಿಕಟ್ಟೆ (masthikatte) 235 ಮಿ.ಮೀ., ಚಕ್ರಾ (chakra) 280 ಮಿ.ಮೀ., ಸಾವೇಹಕ್ಲು (savehaklu) 182 ಮಿ.ಮೀ. ಮಳೆಯಾಗಿರುವುದು ಅಬ್ಬರಕ್ಕೆ ಸಾಕ್ಷಿಯಾಗಿದೆ.

ಸಾಗರ ತಾಲೂಕಿನಲ್ಲಿ ವರದಾ ನದಿ (varada river) ಪ್ರವಾಹ ಸೃಷ್ಟಿಸಿದೆ. ತಾಳಗುಪ್ಪ (talaguppa) ಹೋಬಳಿಯ ಕಾನ್ಲೆ, ಸೈದೂರು, ತಡಗಳಲೆ ಮೊದಲಾದ ಗ್ರಾಮಗಳಲ್ಲಿ ನೂರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿದೆ (agricultural land is flooded). ಆನಂದಪುರ ಸಮೀಪದ ಗೇರುಬೀಸ್ ಗ್ರಾಮದ ಸೇತುವೆ ಮೇಲೆ ಹೊಳೆ ನೀರು ಹರಿಯುತ್ತಿದೆ. ಇದರಿಂದ ಗ್ರಾಮದ ಸಂಪರ್ಕ ಕಡಿತಗೊಂಡಿದೆ ಎಂದು ವರದಿಗಳು ತಿಳಿಸಿವೆ.

ನಿರಂತರವಾಗಿ ಬೀಳುತ್ತಿರುವ ಭಾರೀ ಮಳೆಯಿಂದ  ಶಿವಮೊಗ್ಗ ನಗರ (shimoga city) ಸೇರಿದಂತೆ ಜಿಲ್ಲೆಯ ಹಲವೆಡೆ ಮನೆಗಳ ಗೋಡೆ ಕುಸಿತ ಪ್ರಕರಣಗಳು ವರದಿಯಾಗುತ್ತಿವೆ. ಇದರ ಜೊತೆಗೆ ಹೊಸನಗರ, ತೀರ್ಥಹಳ್ಳಿ, ಸಾಗರದ ಕೆಲವೆಡೆ ಭೂ ಕುಸಿತ , ಮರಗಳು ಬೀಳುತ್ತಿರುವ ಘಟನೆಗಳು ಕೂಡ ನಿರಂತರವಾಗಿ ವರದಿಯಾಗುತ್ತಿವೆ.

ಗಾಜನೂರು ಡ್ಯಾಂನ ತುಂಗಾ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹೊರ ಬಿಡುತ್ತಿರುವ ಕಾರಣದಿಂದ, ಶಿವಮೊಗ್ಗ ನಗರದಲ್ಲಿ ತುಂಗಾ ನದಿ ನೀರಿನ ಹರಿವಿನಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಶುಕ್ರವಾರ ಕೂಡ ನದಿಯು ಅಪಾಯದ ಮಟ್ಟದಲ್ಲಿಯೇ ಹರಿಯುತ್ತಿದ್ದುದು ಕಂಡುಬಂದಿತು.

About The Author

By ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Leave a Reply

Your email address will not be published. Required fields are marked *