Ripponpete | ಅಪ್ಪ ಹೊಡೆದರೆ ಏನು ಮಾಡಬೇಕು.? ಕಳ್ಳರನ್ನು ಹಿಡಿದು ಏನು ಮಾಡ್ತೀರಾ.?? ಪಿಎಸ್‌ಐ ಗೆ ಶಾಲಾ ಮಕ್ಕಳಿಂದ ಕುತೂಹಲದ ಪ್ರಶ್ನೆಗಳು
‘ತೆರೆದ ಮನೆ’ ಕಾರ್ಯಕ್ರಮದಡಿಯಲ್ಲಿ ಠಾಣೆಗೆ ಭೇಟಿ ನೀಡಿದ ಶಾಲಾ ಮಕ್ಕಳೊಂದಿಗೆ ಪೊಲೀಸರ ಸಂವಾದ
ರಿಪ್ಪನ್‌ಪೇಟೆ : ಕೈಗೆ ಬೇಡಿ ಏಕೆ ಹಾಕ್ತಾರೆ, ಮಕ್ಕಳನ್ನು ಜೈಲಿನಲ್ಲಿ ಇಟ್ಟುಕೊಳ್ಳುವುದಿಲ್ಲವೇ, ಪಿಸ್ತೂಲ್ ಯಾವಾಗ ಬಳಸುತ್ತೀರಾ, ಕಳ್ಳರು ಹಿಡಿದು ಏನ್ ಮಾಡುತ್ತೀರಾ.’–ಇದು ಪೊಲೀಸ್ ಇಲಾಖೆಯ ‘ತೆರೆದ ಮನೆ’ ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳು ಪಟ್ಟಣದ ಠಾಣೆಗೆ ಭೇಟಿ ನೀಡಿದಾಗ ಕುತೂಹಲದ ಪ್ರಶ್ನೆಗಳನ್ನು ಠಾಣಾಧಿಕಾರಿ ಪ್ರವೀಣ್ ಎಸ್ ಪಿ ರವರ ಬಳಿ ಕೇಳಿ ಗೊಂದಲ ನಿವಾರಿಸಿಕೊಳ್ಳುತ್ತಿದ್ದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ತೆರೆದ ಮನೆ ಕಾರ್ಯಕ್ರಮದಡಿಯಲ್ಲಿ ಪಟ್ಟಣದ ಮೇರಿಮಾತಾ ಶಾಲೆಯ ವಿದ್ಯಾರ್ಥಿಗಳು ಠಾಣೆಗೆ ಭೇಟಿ ನೀಡಿ ತಮ್ಮಲ್ಲಿದ್ದ ಕೆಲವು ಪ್ರಶ್ನೆಗಳನ್ನು ಕೇಳಿ ಉತ್ತರವನ್ನು ಪಡೆದುಕೊಂಡರು. ನಮ್ಮನ್ನು ಯಾರಾದರೂ ಫಾಲೋ ಮಾಡಿದರೇ ಏನು ಮಾಡಬೇಕು..? ಕಿಡ್ನಾಪ್ ಆದರೆ ಹೇಗೆ ಪತ್ತೆ ಹಚ್ಚುತ್ತೀರಿ , ಅಪ್ಪ ಹೊಡೆದರೇ ಏನು ಮಾಡಬೇಕು ಹೀಗೆ ಹಲವಾರು ಪ್ರಶ್ನೆಗಳನ್ನು ಪಿಎಸ್‌ಐ ಪ್ರವೀಣ್ ರವರ ಬಳಿ ಕೇಳಿ ಉತ್ತರವನ್ನು ಪಡೆಯುತಿದ್ದರು.
ಈ ಸಂಧರ್ಭದಲ್ಲಿ ಮಾತನಾಡಿದ ಪಿಎಸ್‌ಐ ಪ್ರವೀಣ್ ಎಸ್ ಪಿ ಪೊಲೀಸ್ ಎಂದರೆ ಸಾಮಾನ್ಯವಾಗಿ ಮಕ್ಕಳು ಭಯ ಪಡುವುದು ಸಹಜ. ಭಯ ತೊಲಗಿಸಿ, ಮಕ್ಕಳು ತಮ್ಮ ಹಕ್ಕುಗಳಿಗೆ ಚ್ಯುತಿ ಬಂದಾಗ ಮತ್ತು ರಕ್ಷಣೆ ಅವಶ್ಯವೆನಿಸಿದಾಗ ಪೊಲೀಸ್ ಸಹಾಯ ಪಡೆಯಲು ಮಕ್ಕಳ ಸ್ನೇಹಿ ವಾತಾವರಣ ಸೃಷ್ಠಿಸಲು ‘ತೆರೆದ ಮನೆ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
‘ಪೊಲೀಸರೆಂದರೆ ಹೆದರುತ್ತಿದ್ದ ಮಕ್ಕಳು ಈಗ ಧೈರ್ಯವಾಗಿ ಮಾತ ನಾಡುತ್ತಾರೆ. ಬಾಲ್ಯ ವಿವಾಹ ಮಾಡಲು ಮುಂದಾದರೆ ಏನು ಮಾಡ ಬೇಕು, ಪೋಷಕರು–ಶಿಕ್ಷಕರು ಹೊಡೆ ಯುತ್ತಾರೆ, ಶಾಲೆಗಳ ಬಳಿ ಕಿಡಿಗೇಡಿಗಳು ರೇಗಿಸು ತ್ತಾರೆ, ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ, ಅತ್ಯಾಚಾರ ತಡೆ ಯಲು ಏಕೆ ಆಗುತ್ತಿಲ್ಲ ಎಂಬ ಪ್ರಶ್ನೆಗಳನ್ನು ಕೇಳುತ್ತಾರೆ. ಮಕ್ಕಳಿಗೆ ಕಾನೂನಿನ ಬಗ್ಗೆ ಅರಿವು ಮೂಡಿ ಸುವುದರ ಜತೆಗೆ ಯಾವುದನ್ನು ಮಾಡಬೇಕು, ಮಾಡ ಬಾರದು ಎಂಬುದರ ತಿಳುವಳಿಕೆ ನೀಡಲಾಗುತ್ತದೆ’ ಎಂದು ಹೇಳಿದರು.
ತೆರೆದ ಮನೆ ಕಾರ್ಯಕ್ರಮದಡಿಯಲ್ಲಿ ಮಕ್ಕಳಿಗೆ ಕಾನೂನು ತಿಳುವಳಿಕೆ :
ಪೊಲೀಸರ ಕರ್ತವ್ಯ ನಿರ್ವಹಣಾ ವಿಧಾನ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗ, ಅಪರಾಧ ವಿಭಾಗ, ತನಿಖಾಧಿಕಾರಿ ವಿಭಾಗ, ಕಂಪ್ಯೂಟರ್ ವಿಭಾಗ, ಠಾಣಾ ಬರಹಗಾರರ ವಿಭಾಗ, ಠಾಣಾ ದಿನಚರಿ, ಅರ್ಜಿಗಳ ಬಗ್ಗೆಯೂ ಮನವರಿಕೆ ಮಾಡಿಕೊಡಲಾಗುವದು. ಅಂಗ ಶೋಧನಾ ಪುಸ್ತಕ, ಕೈದಿ ಬಂಧನ ಪುಸ್ತಕ, ಸಮನ್ಸ್ ನೋಂದಣಿ, ವಾರಂಟ್ ನೋಂದಣಿ, ಎಂಒಬಿ ಪುಸ್ತಕ, ರೌಡಿ ರಿಜಿಸ್ಟರ್, ಪೂರ್ವ ಸಜಾ ಅಪರಾಧಿ ನೋಂದಣಿ, ಬಂದೂಕು ನೋಂದಣಿ, ಸಣ್ಣ ಅಪರಾಧ ಪುಸ್ತಕ, ಮೋಟಾರು ವಾಹನ ಅಪರಾಧ ಪುಸ್ತಕ ಹಾಗೂ ಅಪರಾಧಿ ದಾಖಲಾತಿ ಪುಸ್ತಕ, ಕಾನೂನು ತಿಳಿವಳಿಕೆ, ಮಕ್ಕಳ ಸುರಕ್ಷತೆ, ರಸ್ತೆ ಸಂಚಾರ ನಿಯಮ, ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣ ಸೇರಿದಂತೆ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿರುವ ಕಾನೂನುಗಳ ಬಗ್ಗೆಯೂ ಮಕ್ಕಳಿಗೆ ತಿಳಿವಳಿಕೆ ನೀಡಲಾಗುತ್ತದೆ.
‘ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿ 1098 ಆರಂಭಿಸಲಾಗಿದೆ. ಪರಿಸರದ ಸುತ್ತಮುತ್ತ ಬಾಲ್ಯವಿವಾಹ ನಡೆಯುತ್ತಿ ದ್ದರೆ, ಲೈಂಗಿಕ ದೌರ್ಜನ್ಯ ಹಾಗೂ ಇತರೆ ಸಮಸ್ಯೆ ಬಗ್ಗೆ ಸಹಾಯವಾಣಿಗೆ ಮಕ್ಕಳು ತಿಳಿಸಬಹುದು ಎಂದು ಈ ಸಂಧರ್ಭದಲ್ಲಿ ತಿಳಿಸಿದರು.