ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಗಮನ ಸೆಳೆದ RCB ಅಭಿಮಾನಿಯಾದ ಜ್ಯೊಮಾಟೋ ಡೆಲಿವರಿ ಬಾಯ್
ಚುನಾವಣೆ 2024ರ ಫಲಿತಾಂಶ ಹೊರಬಿದ್ದಿದೆ. ಎನ್‌ಡಿಎ ಒಕ್ಕೂಟಕ್ಕೆ ಬಹುಮತ ಬಂದಿದ್ದು, ಸರ್ಕಾರ ರಚನೆ ಕಸರತ್ತು ಆರಂಭವಾಗಿದೆ. ಕರ್ನಾಟಕದಲ್ಲಿ ಬಿಜೆಪಿ 17 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 9 ಸ್ಥಾನಗಳನ್ನು ಗೆದ್ದಿದ್ದು, ಜೆಡಿಎಸ್ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಶಿವಮೊಗ್ಗದಲ್ಲಿ ಬಿಜೆಪಿ ಮತ್ತೊಮ್ಮೆ ಪ್ರಾಬಲ್ಯ ಸಾಧಿಸಿದ್ದು, ಬಿವೈ ರಾಘವೇಂದ್ರ 7,78,721 ಮತಗಳನ್ನು ಪಡೆಯುವ ಮೂಲಕ 2,43,715 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಅವರನ್ನು ಸೋಲಿಸಿದರು. ಗೀತಾ ಶಿವರಾಜ್‌ಕುಮಾರ್ 5,35,006 ಸ್ಥಾನಗಳನ್ನು ಪಡೆದರೆ, ಬಂಡಾಯ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ 30,050 ಮತಗಳನ್ನು ಮಾತ್ರ ಪಡೆದರು.
ಆರ್‌ಸಿಬಿ ಅಭಿಮಾನಿ – ಝೊಮ್ಯಾಟೋ ಉದ್ಯೋಗಿಗೆ 7266 ಮತ
ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಗಮನ ಸೆಳೆದ ಮತ್ತೊಬ್ಬ ಅಭ್ಯರ್ಥಿ ಬಂಡಿ ಎನ್ನುವವರು. ಯಾವುದೇ ರಾಜಕೀಯ ಹಿನ್ನಲೆ ಇಲ್ಲದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಂಡಿ ಎನ್ನುವವರು 7,266 ಮತಗಳನ್ನು ಪಡೆದು ಅಚ್ಚರಿ ಮೂಡಿಸಿದ್ದಾರೆ.
ಬಂಡಿ ಎನ್ನುವವರು ಆರ್‌ಸಿಬಿ ತಂಡದ ಕಟ್ಟಾ ಅಭಿಮಾನಿ, ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಕೂಡ ಅವರು ಆರ್‌ಸಿಬಿ ತಂಡದ ಜೆರ್ಸಿಯನ್ನು ಧರಿಸಿದ್ದಾರೆ.
ಬಂಡಿ ಎನ್ನುವವರು ಚುನಾವಣಾ ಆಯೋಗಕ್ಕೆ ನೀಡಿರುವ ಮಾಹಿತಿ ಪ್ರಕಾರ, ಅವರು ಝೊಮ್ಯಾಟೋದಲ್ಲಿ ಡೆಲಿವರಿ ಉದ್ಯೋಗಿಯಾಗಿದ್ದಾರೆ. ಶಿರಾ ಮೂಲದವರಾದ ಬಂಡಿ, ಶಿವಮೊಗ್ಗದಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ತುಮಕೂರಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ ವ್ಯಾಸಂಗ ಮಾಡಿದ್ದಾರೆ. 1,11,052 ರೂಪಾಯಿ ಆಸ್ತಿ ಹೊಂದಿರುವುದಾಗಿ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ.