ಬಂಕಾಪುರ ಠಾಣೆಯ ಪಿಎಸ್‌ಐ ಅಗಿ ನಿಂಗರಾಜ್ ಕೆ ವೈ ಅಧಿಕಾರ ಸ್ವೀಕಾರ | Bankapura

ಬಂಕಾಪುರ ಠಾಣೆಯ ಪಿಎಸ್‌ಐ ಅಗಿ ನಿಂಗರಾಜ್ ಕೆ ವೈ ಅಧಿಕಾರ ಸ್ವೀಕಾರ
ಬಂಕಾಪುರ : ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ವರ್ಗಾವಣೆಗೊಂಡಿದ್ದ ಜನಸ್ನೇಹಿ ಹಾಗೂ ಖಡಕ್ ಪಿಎಸ್‌ಐ ನಿಂಗರಾಜ್ ಕೆ ವೈ ಇಂದು ಪಟ್ಟಣದ ಠಾಣಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದರು.

ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ನಿಂಗರಾಜ್ ಕೆ ವೈ ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು.

 ಬಂಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನಸ್ನೇಹಿ ಪೊಲೀಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದ ನಿಂಗರಾಜ್ ಕೆ ವೈ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ನಾಲ್ಕು ತಿಂಗಳು ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು.

ರಿಪ್ಪನ್‌ಪೇಟೆಯಲ್ಲಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದ ಪಿಎಸ್‌ಐ ನಿಂಗರಾಜ್ 

ರಿಪ್ಪನ್‌ಪೇಟೆಯಲ್ಲಿ ಸುಮಾರು ನಾಲ್ಕು ತಿಂಗಳುಗಳಿಂದ ಕಾರ್ಯ ನಿರ್ವಹಿಸಿರುವ ನಿಂಗರಾಜ್ ಕೆ ವೈ ರವರು ಪಟ್ಟಣದಲ್ಲಿ‌ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ಮಲೆನಾಡಿಗರನ್ನು ಬೆಚ್ಚಿ ಬೀಳಿಸಿದ್ದ ಹುಂಚ ಮುತ್ತಿನಕೆರೆಯ ಜಯಮ್ಮ ಕೊಲೆ ಪ್ರಕರಣವನ್ನು ಘಟನೆ ನಡೆದು ಹದಿನೈದು ದಿನಗಳೊಳಗೆ ಆರೋಪಿ ಮಯೂರ್ ಭಟ್ ನ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದರು.ಇನ್ನೊಂದು ಪ್ರಕರಣದಲ್ಲಿ ದೂನ ಗ್ರಾಮದಲ್ಲಿ ನಡೆದಿದ್ದ ಬೈಕ್ ಕಳ್ಳತನ ಪ್ರಕರಣವನ್ನು ಕೇವಲ 2 ಗಂಟೆಯಲ್ಲಿ ಪತ್ತೆ ಹಚ್ಚುವ ಮೂಲಕ ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. 


ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯ ಸೂಕ್ಷ್ಮ ಪ್ರದೇಶಗಳಲ್ಲಿ ಕಿಡಿಗೇಡಿಗಳ ಕಾನೂನು ಬಾಹಿರ ಚಟುವಟಿಕೆಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಹಲವು ಕಡೆ ಪಿಎಸ್‌ಐ ನಿಂಗರಾಜ್ ಕೆ ವೈ ತಮ್ಮ ಸ್ವಂತ ಖರ್ಚಿನಲ್ಲಿ ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದು ಕಿಡಿಗೇಡಿಗಳ ನಿದ್ದೆಗೆಡಿಸಿತ್ತು.ಇದು ರಾಜ್ಯ ಮಟ್ಟದ ಸುದ್ದಿ ವಾಹಿನಿಯಲ್ಲಿ ಪ್ರಕಟಗೊಂಡು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು.


ಈ ಬಾರಿಯ ಬರಗಾಲದ ಹಿನ್ನಲೆಯಲ್ಲಿ ಪ್ರಾಣಿ ಪಕ್ಷಿಗಳು ನೀರಿನ ಬವಣೆಗೊಳಗಾಗಿದ್ದವು ಈ ಹಿನ್ನಲೆಯಲ್ಲಿ ಪಿಎಸ್‌ಐ ನಿಂಗರಾಜ್ ತಮ್ಮ ಸಿಬ್ಬಂದಿಗಳೊಂದಿಗೆ ಅರಣ್ಯ ಇಲಾಖೆ ಹಾಗೂ ಪೋಸ್ಟ್ ಮ್ಯಾನ್ ನ್ಯೂಸ್ ಬಳಗದ ಅಶ್ರಯದಲ್ಲಿ ” ಪಕ್ಷಿಗಳಿಗೆ ನೀರುಣಿಸಿ – ಪಕ್ಷಿ ಸಂಕುಲ ಉಳಿಸಿ” ಎಂಬ ಅಭಿಯಾನದಡಿಯಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರಿಡುವ ಅಭಿಯಾನ ನಡೆಸಿದ್ದು ಜನ ಮೆಚ್ಚುಗೆಗೆ ಪಾತ್ರವಾಗಿತ್ತು.


ಲೋಕಸಭಾ ಚುನಾವಣೆ ಸಂಧರ್ಭದಲ್ಲಿ ನಡೆದಿದ್ದ ಕೆಲವು ಸೂಕ್ಷ್ಮ ಘಟನೆಗಳನ್ನು ನಾಜೂಕಿನಿಂದ ನಿಭಾಯಿಸಿದ್ದ ನಿಂಗರಾಜ್ ಯಾವುದೇ ಗೊಂದಲಗಳಿಗೆ ಅವಕಾಶ ನೀಡದೇ ಚುನಾವಣೆ ಯಶಸ್ವಿಗೊಳಿಸಿದ್ದರು.

ಸರಳ ಸಜ್ಜನಿಕೆಯ ಮೂಲಕ ತನ್ನ ಕಾರ್ಯಾವಧಿಯಲ್ಲಿ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಿದ ನಿಂಗರಾಜ್ ಕೆ ವೈ ರಿಪ್ಪನ್‌ಪೇಟೆ ಭಾಗದ ಜನಮಾನಸದಲ್ಲಿ ಅಚ್ಚಳಿಯದೇ ಉಳಿದುಕೊಂಡಿದ್ದಾರೆ.

Leave a Reply

Your email address will not be published. Required fields are marked *