ಪವರ್ ಟಿವಿ ಪ್ರಸಾರ ಸ್ಥಗಿತಗೊಳಿಸಲು ಹೈಕೋರ್ಟ್ ಆದೇಶ | power tv news banned

ಪವರ್ ಟಿವಿ ಪ್ರಸಾರ ಸ್ಥಗಿತಗೊಳಿಸಲು ಹೈಕೋರ್ಟ್ ಆದೇಶ | power tv news banned

ತತಕ್ಷಣದಿಂದ ಕನ್ನಡ ಸುದ್ದಿ ವಾಹಿನಿ ಪವರ್‌ ಟಿವಿ ತನ್ನೆಲ್ಲಾ ಕಾರ್ಯಕ್ರಮಗಳ ಪ್ರಸಾರವನ್ನು ನಿಲ್ಲಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.

ಕೇಂದ್ರ ವಲಯದ ಐಜಿ ಬಿಆರ್‌ ರವಿಕಾಂತೇಗೌಡ, ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್‌ಎಂ ರಮೇಶ್‌ ಗೌಡ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣಕುಮಾರ್ ಅವರನ್ನು ಒಳಗೊಂಡ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಪವರ್‌ ಟಿವಿ ತನ್ನ ಚಾನೆಲ್‌ಗೆ ಪರವಾನಗಿ ನವೀಕರಿಸದ ಹಿನ್ನೆಲೆಯಲ್ಲಿ ಎಲ್ಲ ಕಾರ್ಯಕ್ರಮ ಸ್ಥಗಿತಗೊಳಿಸಲು ಆದೇಶಿಸಲಾಗಿದೆ. ಧರ್ಮಸ್ಥಳದ ಸೌಜನ್ಯ ಹೋರಾಟಗಾರರ ಬಗ್ಗೆ ಟೀಕೆ ಸೇರಿದಂತೆ ಹಲವಾರು ಮಾನಹಾನಿಕರ ಸುದ್ದಿಗಳನ್ನು ಬಿತ್ತರಿಸಿದ ಆರೋಪವನ್ನು ಪವರ್ ಟಿವಿ ಹೊಂದಿದೆ.

ಅರ್ಜಿದಾರರ ಪರ ಹಾಜರಾದ ಹೈಕೋರ್ಟ್‌ನ ಹಿರಿಯ ವಕೀಲ ಪ್ರಭುಲಿಂಗ ಕೆ ನಾವದಗಿ, ಸಂದೇಶ್ ಜೆ ಚೌಟ, ಡಿ ಆರ್‌ ರವಿಶಂಕರ್, “ಪ್ರತಿವಾದಿ ರಾಕೇಶ್ ಶೆಟ್ಟಿ ತನ್ನ ಟಿವಿ ಚಾನೆಲ್‌ನಲ್ಲಿ ಅರ್ಜಿದಾರರ ವಿರುದ್ಧ ಮಾನಹಾನಿಕರ ಸುದ್ದಿಗಳನ್ನು ಬಿತ್ತರಿಸುತ್ತಿದ್ದಾರೆ. ರಾಕೇಶ್ ಶೆಟ್ಟಿ ಅವರು ತಮ್ಮ ಚಾನೆಲ್ ಅನ್ನು ಕಾನೂನುಬಾಹಿರವಾಗಿ ನಡೆಸುತ್ತಿದ್ದಾರೆ. 2021ರಿಂದಲೂ ಈ ಚಾನೆಲ್‌ನ ಪರವಾನಗಿ ನವೀಕರಣವಾಗಿಲ್ಲ” ಎಂದು ನ್ಯಾಯಪೀಠಕ್ಕೆ ತಿಳಿಸಿದ್ದಾರೆ.

ವಾದವನ್ನು ಆಲಿಸಿದ ನ್ಯಾಯಪೀಠವು, “ಕೇಬಲ್‌ ಟೆಲಿವಿಷನ್‌ ನೆಟ್‌ವರ್ಕ್‌ಗಳ (ನಿಯಂತ್ರಣ) ಕಾಯಿದೆ 1995ರ ಆದೇಶ ಉಲ್ಲಂಘಿಸಿರುವ ಕಾರಣ ತಕ್ಷಣದಿಂದಲೇ ತಮ್ಮ ಚಾನೆಲ್‌ನಲ್ಲಿ ಸುದ್ದಿಗಳೂ ಸೇರಿದಂತೆ ಯಾವುದೇ ಕಾರ್ಯಕ್ರಮಗಳನ್ನು ಜುಲೈ 8ರವರೆಗೆ ಪ್ರಸಾರ ಮಾಡಬಾರದು” ಎಂದು ಪ್ರತಿವಾದಿ ರಾಕೇಶ್ ಶೆಟ್ಟಿಗೆ ಆದೇಶಿಸಿದೆ.

Leave a Reply

Your email address will not be published. Required fields are marked *