ನಟ ಶಿವರಾಜ್ ಕುಮಾರ್ ಬಗ್ಗೆ ವ್ಯಂಗ್ಯ ಹೇಳಿಕೆ – ಕುಮಾರ್ ಬಂಗಾರಪ್ಪ ಮನೆ ಮೇಲೆ ಅಭಿಮಾನಿಗಳಿಂದ ಮುತ್ತಿಗೆ | Shivarajkumar – kumarbangarappa
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಗೀತಾ ಶಿವರಾಜಕುಮಾರ್ ಸೋತ ಬೆನ್ನಲ್ಲೇ ನಟ ಶಿವರಾಜಕುಮಾರ್ ಬಗ್ಗೆ ವ್ಯಂಗ್ಯವಾಗಿ ಹೇಳಿಕೆ ನೀಡಿದ್ದ ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪ ( Kumar Bangarppa ) ಅವರ ಬೆಂಗಳೂರಿನ ಸದಾಶಿವನಗರ ಮನೆ ಮೇಲೆ ಶಿವಣ್ಣ ಬೆಂಬಲಿಗರು ಮುತ್ತಿಗೆ ಹಾಕಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ತ್ರೀಕೋನ ಸ್ಪರ್ಧೆ ಏರ್ಪಟ್ಟಿತ್ತು. ಬಿಜೆಪಿಯಿಂದ ಸಂಸದ ಬಿವೈ ರಾಘವೇಂದ್ರ, ಕಾಂಗ್ರೆಸ್ನಿಂದ ನಟ ಶಿವರಾಜಕುಮಾರ್ ಪತ್ನಿ ಗೀತಾ ಶಿವರಾಜಕುಮಾರ್ ಮತ್ತು ಬಂಡಾಯ ಅಭ್ಯರ್ಥಿ, ಮಾಜಿ ಸಚಿವ ಕೆಎಸ್ ಈಶ್ವರಪ್ಪ ಸ್ಪರ್ಧಿಸಿದ್ದರು.ಚುನಾವಣೆಯಲ್ಲಿ ಬಿವೈ ರಾಘವೇಂದ್ರ ಅವರು ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಬಿವೈ ರಾಘವೇಂದ್ರ ಗೆಲುವಿನ ಬಳಿಕ, ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪ ನಟ ಶಿವರಾಜಕುಮಾರ್ ಅವರ ಬಗ್ಗೆ ಲಘುವಾಗಿ ಬರೆದು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದು, ಶಿವಣ್ಣ ಅಭಿಮಾನಿಗಳು ಆಕ್ರೋಶಗೊಳ್ಳುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಇಂದು (ಜೂ.08) ನಟ ಶಿವರಾಜಕುಮಾರ್ ಬೆಂಬಲಿಗರು ಬೆಂಗಳೂರಿನ ಸದಾಶಿವನಗರದಲ್ಲಿರುವ ಕುಮಾರ್ ಬಂಗಾರಪ್ಪ ಮನೆಗೆ ಮುತ್ತಿಗೆ ಹಾಕಿದ್ದಾರೆ.
ಕುಮಾರ್ ಬಂಗಾರಪ್ಪ ಫೋಸ್ಟ್ನಲ್ಲಿ ಏನಿದೆ?
ಕುಮಾರ್ ಬಂಗಾರಪ್ಪ ಫೇಸ್ಬುಕ್ನಲ್ಲಿ ಪೋಸ್ಟ್, ತಮ್ಮ ಸಹೋದರ ಮಧು ಬಂಗಾರಪ್ಪ, ಸಹೋದರಿ ಗೀತಾ ಶಿವರಾಜ್ ಕುಮಾರ್ ಅವರನ್ನು ಟೀಕಿಸಿರುವ ಜೊತೆಗೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಶಿವರಾಜ್ ಕುಮಾರ್ ಅವರ ಬಗ್ಗೆ ಲಘುವಾಗಿ ಬರೆದಿದ್ದರು. “ಶಿವರಾಜಕುಮಾರ್ ನಿರುದ್ಯೋಗಿಯಾಗಬೇಕಿಲ್ಲ, ನಮ್ಮೂರ ಜಾತ್ರೆಗಳಲ್ಲಿ ಕುಣಿಯುವ ಕೆಲಸಕ್ಕೆ ಈಗಲೇ ಅರ್ಜಿ ಹಾಕಿಕೊಳ್ಳಬಹುದು” ಎಂದಿದ್ದರು.
ಅಷ್ಟಕ್ಕೆ ಸುಮ್ಮನಾಗದೆ, “ನನ್ನ ತಂಗಿ (ಗೀತಾ ಶಿವರಾಜ್ ಕುಮಾರ್) ಸಿನಿಮಾ ಡಾನ್ ಆಗಿರುವುದರಿಂದ ಬೇಸರಕ್ಕೆ ಕಾರಣವಿಲ್ಲ ದೊಡ್ಡಮನೆಯ ವ್ಯವಹಾರ ಸಾಕಷ್ಟಿರುತ್ತದೆ, ಬೇರೆಯವರಿಗೆ ಅವಕಾಶ ಸಿಗಲಾರದು. ಹೆದರಿಸುವ, ಬೆದರಿಸುವ, ಹುಷಾರ್ ಅನ್ನುವ ಮಾತುಗಳೇನಿದ್ದರೂ ಗಂಟಲೋಳಗೇ, ನಾಲ್ಕು ಗೋಡೆಗಳೊಳಗೆ, ತಮ್ಮ ಪಟಾಲಂ ಮುಂದೆ ಮಾತ್ರ ಚಾಲ್ತಿಯಲ್ಲಿರಬೇಕು. ದಿಕ್ಕು ಗೆಟ್ಟು ದಿಕ್ಕಾಪಾಲಾಗಿ ಹೋಗಿ ಬೆಂಗಳೂರು ಸೇರಿಕೊಂಡವರಿಗೆ ಕೊನೆಯ ಎಚ್ಚರಿಕೆ, ನೀವು ಹಿಂತಿರುಗಿ ಬರುವುದು ಕನಸಿನ ಮಾತು” ಎಂದು ಎಚ್ಚರಿಕೆಯನ್ನು ಸಹ ಕೊಟ್ಟಿದ್ದರು.
ಕುಮಾರ್ ಬಂಗಾರಪ್ಪ ಅವರ ಈ ಫೋಸ್ಟ್ನಿಂದ ಆಕ್ರೋಶಗೊಂಡಿರುವ ಶಿವಣ್ಣ ಅಭಿಮಾನಿಗಳು, ಕುಮಾರ ಬಂಗಾರಪ್ಪ ಅವರ ನಿವಾಸದ ಗೇಟ್ ಒಳಗೆ ನುಗ್ಗಿ ದಿಕ್ಕಾರ ಕೂಗಿದರು. ಕೂಡಲೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮನೆಯಿಂದ ಹೊರಗೆ ಹೋಗುವಂತೆ ಮನವಿ ಮಾಡಿದರು. ಈ ವೇಳೆ ಅಭಿಮಾನಿಗಳು ಮತ್ತು ಪೊಲೀಸರ ಮಾತಿನ ಚಕಮಕಿ ಏರ್ಪಟ್ಟಿತು.
“ಶಿವರಾಜಕುಮಾರ್ ಅವರ ಬಗ್ಗೆ ರಾಜಕುಮಾರ್ ಕುಟುಂಬದ ಬಗ್ಗೆ ಮಾತಾಡಿದ್ದಾರೆ. ಇದು ನಮಗೆ ನೋವಾಗಿದೆ. ಅವರನ್ನ ಹೊರಗೆ ಕರೆಸಿ ಕ್ಷಮೆ ಕೇಳುವಂತೆ ಹೇಳಿ” ಎಂದು ಅಭಿಮಾನಿಗಳು ಒತ್ತಾಯಿಸಿದರು. ಪೊಲೀಸರು ಅಭಿಮಾನಿಗಳನ್ನು ವಶಕ್ಕೆ ಪಡೆದುಕೊಂಡರು.