ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ | Crime News

Shivamogga | ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ 

ಕೊಲೆ ಪ್ರಕರಣವೊಂದರಲ್ಲಿ ಇಬ್ಬರು ಆರೋಪಿಗಳಿಗೆ ತಲಾ 50 ಸಾವಿರ ರೂ. ದಂಡ ಮತ್ತು ಜೀವಾವಧಿ ಶಿಕ್ಷೆ ನೀಡಿ ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

2021 ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ವಾದಿ ಎ‌ ಹುದಾ ಬಡಾವಣೆಯಲ್ಲಿ ಮೊಹಮದ್ ಜೈದಾನ್ ಎಂಬಾತನನ್ನು ಕೊಲೆ ಮಾಡಲಾಗಿತ್ತು. 

ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಪಿ. ಓ. ಪುಷ್ಪಾ, ಸರ್ಕಾರಿ ಅಭಿಯೋಜಕರು, ಪ್ರಕರಣದ ವಾದ ಮಂಡಿಸಿದ್ದು, ಘನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು, ಪ್ರಕರಣದ ಆರೋಪಿಗಳಾದ 1) ಮಹಮ್ಮದ್ ನಖಿ ಅಲಿ @ ನಖಿ @ ಮಣಿ, 21 ವರ್ಷ, ಲಕ್ಷರ್ ಮೊಹಲ್ಲಾ, ಶಿವಮೊಗ್ಗ ಟೌನ್, 2) ಮಹಮ್ಮದ್ ಅಬು ಸ್ವಲೇಹ @ ಅಬು @ ಸೋನು, 21 ವರ್ಷ, ಇಲಿಯಾಸ್ ನಗರ, ಶಿವಮೊಗ್ಗ ಟೌನ್ ಇವರುಗಳ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧಿಶರಾದ ಪಲ್ಲವಿ ಬಿ.ಆರ್ ರವರು ನಿನ್ನೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ರೂ 50,500/- ದಂಡ ವಿಧಿಸಿ ತೀರ್ಪು ನೀಡಿದ್ದಾರೆ

ಮೃತನ ತಂದೆ ಮತ್ತು ತಾಯಿ ಇಬ್ಬರಿಗೂ ದಂಡದ ಮೊತ್ತದಲ್ಲಿ ತಲಾ 40,000/- ರೂ. ಮತ್ತು ಸರ್ಕಾರದಿಂದ ಸೂಕ್ತ ಪರಿಹಾರ ನೀಡಲು ಆದೇಶಿಸಿದ್ದಾರೆ.

ಘಟನೆಯ ಹಿನ್ನಲೆ : 

ಶಿವಮೊಗ್ಗ ಟೌನ್ ವಾದಿ-ಎ-ಹುದಾ ವಾಸಿ ಮಹಮ್ಮದ್ ಜೈದಾನ್ ಮತ್ತು ಶಿವಮೊಗ್ಗ ಟೌನ್ ಲಕ್ಷರ್ ಮೊಹಲ್ಲಾದ ವಾಸಿ ನಕೀ ಅಲಿ ಇಬ್ಬರ ನಡುವೆ ಯಾವುದೋ ವಿಚಾರವಾಗಿ ಹಿಂದೆ ಜಗಳವಾಗಿತ್ತು. ಇವರಿಬ್ಬರ ಜಗಳದಿಂದಾಗಿ ಜೈದಾನ್ ನ ತಂದೆ ನಜೀರ್ ಅಹಮದ್ ಅವರು ಬಾಪೂಜಿ ನಗರದಿಂದ ವಾದಿ ಎ ಹುದಾ ಬಡಾವಣೆಗೆ ಶಿಫ್ಟ್ ಆಗಿದ್ದರು.

ಆದರೂ ಬಿಡದ ಆರೋಪಿಗಳು 2021 ನೇ ಇಸವಿಯ  ಅ.29   ರಂದು ರಾತ್ರಿ ಶಿವಮೊಗ್ಗ ಟೌನ್ ವಾದಿ-ಎ-ಹುದಾ ಹತ್ತಿರ ನಕೀ ಅಲಿ ಅವಿತು ಕುಳಿತು ಜೈದಾನ್ ಬರುವವರೆಗೂ ಕಾದು ನಂತರ ಮಹಮ್ಮದ್ ಅಬು ಸ್ವಲೇಹ ಜೊತೆ ಸೇರಿಕೊಂಡು ಮಹಮ್ಮದ್ ಜೈದಾನ್ ನ ಮೇಲೆ ಹರಿತವಾದ ಆಯುಧಗಳಿಂದ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಿದ್ದರು.

ಈ ಬಗ್ಗೆ ಮೃತನ ತಂದೆ ನೀಡಿದ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿಗಳಾದ  ದೀಪಕ್ ಎಂ.ಎಸ್, ಪೊಲೀಸ್ ನಿರೀಕ್ಷಕರು, ತುಂಗಾನಗರ ಪೊಲೀಸ್ ಠಾಣೆ ರವರು ಪ್ರಕರಣದ ತನಿಖೆ ಪೂರೈಸಿ ಆರೋಪಿತರ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.‌

Leave a Reply

Your email address will not be published. Required fields are marked *