Ripponpete | ಪಟ್ಟಣದಲ್ಲಿ ಅಬ್ಬರಿಸಿದ ಮಳೆರಾಯ – ಹೋಂಡಾ ಶೋರೂಂ , ಮನೆಗಳಿಗೆ ನುಗ್ಗಿದ ನೀರು
ರಿಪ್ಪನ್‌ಪೇಟೆ : ಪಟ್ಟಣದಾದ್ಯಂತ ಜೋರು ಮಳೆಯಾಗುತ್ತಿದ್ದು ಹಲವು ಕಡೆ ಮನೆ ಹಾಗೂ ಅಂಗಡಿಗಳಿಗೆ ನೀರು ನುಗ್ಗಿರುವ ಘಟನೆ ನಡೆದಿದೆ.
ಸಾಗರ ರಸ್ತೆಯ ಕಾಮಗಾರಿ ನಡೆಯುತಿದ್ದು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆ ಬದಿಯ ಮನೆ, ಅಂಗಡಿಗಳಿಗೆ ನುಗ್ಗಿ ಆವಾಂತರ ಸೃಷ್ಟಿಯಾಗಿದೆ.
ಸಾಗರ ರಸ್ತೆಯ ಹೋಂಡಾ ಬೈಕ್ ಶೋರೂಮ್ ಗೆ ನೀರು ನುಗ್ಗಿದ್ದು ಹಲವಾರು ಬೈಕ್ ಗಳು ಜಲಾವೃತ್ತಗೊಂಡಿವೆ, SBI ಬ್ಯಾಂಕ್ ಬಳಿಯಿರುವ ಶಾಲಿಮಾರ್ ಹೊಟೇಲ್ ಒಳಗೆಲ್ಲಾ ನೀರು ತುಂಬಿಕೊಂಡಿವೆ.ಹೊಸನಗರ ರಸ್ತೆಯ ಮಾಡ್ರನ್ ಮಿಲ್ ಮುಂಭಾಗದ ಬಾಬಣ್ಣ ಎಂಬುವವರ ಮನೆಗೆ ನೀರು ನುಗ್ಗಿದೆ.
ಸಾಗರ ರಸ್ತೆಯಲ್ಲಿ ರಸ್ತೆ ಮೇಲೆ ನೀರು ನದಿಯಂತೆ ಹರಿಯುತಿದ್ದು ವಾಹನ ಸಂಚಾರಕ್ಕೆ ಅಡಚಣೆಯುಂಟು ಮಾಡಿದೆ.
ಇವತ್ತು ಬೆಳಗ್ಗೆ ಕೆಲ ಹೊತ್ತು ಮೋಡ ಕವಿದ ವಾತಾವರಣ ಇತ್ತು. ಬಳಿಕ ಬಿಸಿಲು ಜೋರಾಗಿತ್ತು. ಸಂಜೆ ವೇಳೆಗೆ ದಟ್ಟ ಮೋಡ ಆವರಿಸಿ, ಜೋರು ಮಳೆ ಶುರುವಾಗಿದೆ.
ಸಾರ್ವಜನಿಕರ ಆಕ್ರೋಶ :
ಸಾಗರ ರಸ್ತೆಯಲ್ಲಿ ರಸ್ತೆ ಕಾಮಗಾರಿ ಕೆಲಸ ಆಮೆಗತಿಯಲ್ಲಿ ನಡೆಯುತಿದ್ದು ಒಂದು ಕಿ ಮೀ ರಸ್ತೆಯನ್ನು ಒಂದು ವರ್ಷವಾದರೂ ಕಾಮಗಾರಿ ಪೂರ್ಣಗೊಂಡಿಲ್ಲ ,ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿರುವ ಹಿನ್ನಲೆಯಲ್ಲಿ ನೀರು ರಸ್ತೆ ಮೇಲೆ ಹರಿದು ಅಂಗಡಿ ಮನೆಗಳಿ ನುಗ್ಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.