Anandapura | ಅಡಿಕೆ ಕಳ್ಳರ ಬಂಧನ – ಲಕ್ಷಾಂತರ ರೂ ಮೌಲ್ಯದ ಅಡಿಕೆ ವಶಕ್ಕೆ
ಅಡಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ 8 ಪ್ರಕರಣಗಳನ್ನು ಪತ್ತೆ ಮಾಡಿ 5 ಆರೋಪಿಗಳನ್ನು ಬಂಧಿಸಿ ಅವರಿಂದ ₹ 15.19 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಹೇಳಿದರು.
ಶಿಕಾರಿಪುರ ತಾಲ್ಲೂಕಿನ ಹರಗುವಳ್ಳಿ ಗ್ರಾಮದ ತುಕ್‌ರಾಜ್ (24), ಹಣಮಂತ (24), ರಾಕೇಶ್ (20), ಅಭಿಷೇಕ್ (20), ಶಿವಕುಮಾರ್ (23) ಬಂಧಿತರು.
ಸಾಗರ ಗ್ರಾಮಾಂತರ, ಆನಂದಪುರ, ಕಾರ್ಗಲ್ ಮತ್ತು ಸೊರಬ ಠಾಣಾ ವ್ಯಾಪ್ತಿಯಲ್ಲಿ ಈಚೆಗೆ ಅಡಿಕೆ ಕಳವು ಪ್ರಕರಣಗಳು ಹೆಚ್ಚು ದಾಖಲಾಗಿದ್ದವು. ಹೀಗಾಗಿ ಆರೋಪಿಗಳ ಪತ್ತೆಗಾಗಿ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿತ್ತು. ತಂಡವು ಭಾನುವಾರ 5 ಆರೋಪಿಗಳನ್ನು ಬಂಧಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಎಸ್ಪಿ ಜಿ.ಕೆ. ಮಿಥುನ್ ಕುಮಾರ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ-2 ಕಾರಿಯಪ್ಪ ಎ.ಜಿ. ಮಾರ್ಗದರ್ಶನದಲ್ಲಿ ಸಾಗರ ಉಪವಿಭಾಗ ಪೊಲೀಸ್ ಅಧೀಕ್ಷಕ ಗೋಪಾಲಕೃಷ್ಣ ನಾಯ್ಕ ಅವರ ಮೇಲ್ವಿಚಾರಣೆಯಲ್ಲಿ, ಸಾಗರ ಗ್ರಾಮಾಂತರ ಪೊಲೀಸ್ ನಿರೀಕ್ಷಕ ಮಹಾಬಲೇಶ್ವರ ಎಸ್.ಎನ್., ಪಿಎಸ್‌ಐ ಎ.ಆರ್. ಮುಂದಿನಮನಿ, ಸಿಬ್ಬಂದಿ ಸನಾವುಲ್ಲಾ, ಷೇಖ್ ಫೈರೋಜ್ ಅಹ್ಮದ್, ರವಿಕುಮಾರ್, ಪ್ರವೀಣ್‌ಕುಮಾರ್, ಗುರುಬಸವರಾಜ, ಗಿರೀಶ್ ಬಾಬು, ಗುರುರಾಜ, ಇಂದ್ರೇಶ್, ವಿಜಯ್‌ಕುಮಾರ್ ಅವರನ್ನೊಳಗೊಂಡ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.