ಪೊಲೀಸರ ಮೇಲೆ ಹಲ್ಲೆಗೆ ಯತ್ನ – ರೌಡಿಶೀಟರ್ ಶೋಹಿಬ್ ಕಾಲಿಗೆ ಗುಂಡೇಟು | Crime News
ಶಿವಮೊಗ್ಗ : ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ರೌಡಿ ಶೀಟರ್ ಶೋಹಿಬ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಬೀರನಕೆರೆ ಬಳಿ ಘಟನೆ ನಡೆದಿದೆ.
ತ್ರಿಬಲ್ ಮರ್ಡರ್ ಪ್ರಕರಣದ ಆರೋಪಿ, ರೌಡಿ ಶೀಟರ್ ಶೋಹಿಬ್ ಕಾಲಿಗೆ ಪೊಲೀಸರು ಶೂಟ್ ಮಾಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯ ಬೀರನಕೆರೆ ಬಳಿ ರೌಡಿ ಶೀಟರ್ ಶೋಹಿಬ್‌ನನ್ನು ಬಂಧಿಸಲು ಹೋದಾಗ ಆತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ. ಪಿಎಸ್‌ಐ ಕುಮಾರ್ ಹಾಗೂ ಹೆಡ್ ಕಾನ್ಸ್‌ಟೇಬಲ್ ಅಣ್ಣಪ್ಪ ಮೇಲೆ ಹಲ್ಲೆಗೆ ಯತ್ನಿಸಿದ್ದ ಶೋಹಿಬ್ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಗಾಯಗೊಳಿಸಿ ಬಂಧಿಸಿದರು.
ಶಿವಮೊಗ್ಗ ನಗರದ ಲಷ್ಕರ್ ಮೊಹಲ್ಲಾ ಸರ್ಕಲ್ ಬಳಿ ಗ್ಯಾಂಗ್ ವಾರ್ ನಡೆದಿತ್ತು. ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್‌ಗಳನ್ನು ಕೊಚ್ಚಿ ಕೊಲೆ (Murder Case) ಮಾಡಲಾಗಿತ್ತು. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಭೀಕರವಾಗಿ ದುಷ್ಕರ್ಮಿಗಳು ಕೊಲೆ ಮಾಡಿದ್ದರು. ತುಂಗಾನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಶೋಹೆಬ್ ಅಲಿಯಾಸ್ ಸೇಬು, ದೊಡ್ಡಪೇಟೆ ಠಾಣಾ ವ್ಯಾಪ್ತಿಯ ರೌಡಿಶೀಟರ್ ಗೌಸ್ ಹತ್ಯೆಯಾಗಿತ್ತು. ಚಾಕುವಿನಿಂದ ತಿವಿತಕ್ಕೊಳಗಾಗಿ ತೀವ್ರವಾಗಿ ಗಾಯಗೊಂಡಿದ್ದ ಯಾಸೀನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.