sagara | ಅಡಿಕೆ ವ್ಯಾಪಾರಿಗಳಿಗೆ 4 ಕೋಟಿ ರೂ ವಂಚಿಸಿದ್ದ ಆರೋಪಿಯ ಬಂಧನ

ಅಡಿಕೆ ವ್ಯಾಪಾರಿಗಳಿಗೆ 4 ಕೋ. ರೂ. ವಂಚನೆ : ಓರ್ವನ ಸೆರೆ


ಸಾಗರ :  ಸುಮಾರು 60ಕ್ಕೂ ಹೆಚ್ಚು ಸಣ್ಣ ಅಡಿಕೆ ವ್ಯಾಪಾರಿಗಳಿಗೆ ಅಂದಾಜು 4 ಕೋ. ರೂ. ವಂಚಿಸಿದ್ದ ಆರೋಪದಲ್ಲಿ ನಗರದ ಅಜೀಂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮೂಲತಃ ನೆಹರು ನಗರದ ಮದೀನಾ ಮಸೀದಿ ಪಕ್ಕದ ನಿವಾಸಿಯಾಗಿದ್ದ ಅಜೀಂ ಬೆಂಗಳೂರಿನಲ್ಲಿ ಖಾಸಗಿ ಚಿಟ್‌ಫಂಡ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ.

ಕೊರೊನಾ ಕಾಲದಲ್ಲಿ, ಅಂದರೆ 2020ರಲ್ಲಿ ಸಾಗರಕ್ಕೆ ಬಂದು ಸಣ್ಣದಾಗಿ ಅಡಿಕೆ ವ್ಯವಹಾರ ಆರಂಭಿಸಿದ್ದ. ಜತೆಯಲ್ಲಿ ಆನ್‌ಲೈನ್‌ ಜೂಜಾಟ ಆಡುವ ಅಭ್ಯಾಸವಿತ್ತು ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಈತ ಇಲ್ಲಿನ ಸಣಪುಟ್ಟ ವ್ಯಾಪಾರಿಗಳಿಂದ ಉದ್ರಿ ಲೆಕ್ಕದಲ್ಲಿ ಖರೀದಿಸಿ, ಬೇರೆಯವರಿಗೆ ಮಾರುತ್ತಿದ್ದ. ಆನ್‌ಲೈನ್‌ ಜೂಜಾಟದ ಅಭ್ಯಾಸವಿದ್ದ ಈತ ವ್ಯಾಪಾರದಲ್ಲಿ ಬಂದ ಲಾಭವನ್ನು ಅದರಲ್ಲಿ ಕಳೆದು ಕೊಳ್ಳುತ್ತಿದ್ದ. ಕಳೆದ 7-8 ತಿಂಗಳಿಂದ ಜೂಜಾಟದಿಂದ ನಿರಂತರ ನಷ್ಟವಾಗಿ ಸಾಲದ ಮೊತ್ತವೂ ಕೋಟಿ ಲೆಕ್ಕದಲ್ಲಿ ಬೆಳೆದಿತ್ತು. ಅಡಿಕೆ ಪಡೆದವರಿಗೆ ಹಣ ನೀಡಲು ಸಾಧ್ಯವಾಗದ ಪರಿಸ್ಥಿತಿಗೆ ಬಂದಿದ್ದ. ಅಡಿಕೆ ಕೊಟ್ಟವರು ಮನೆಗೆ ಬರುತ್ತಿದ್ದಂತೆ ಕೆಲವು ದಿನ ತಲೆ ಮರೆಸಿಕೊಂಡು ಬೆಂಗಳೂರು, ಬಿಹಾರ ಎಂದೆಲ್ಲ ಓಡಾಡಿ ಸಾಗರಕ್ಕೆ ಮರಳಿದ್ದ. ಇದನ್ನೇ ಕಾದಿದ್ದ ಹಲವು ಅಡಿಕೆ ವ್ಯಾಪಾರಿಗಳು ಪೊಲೀಸರಿಗೆ ದೂರು ನೀಡಿದ್ದರು.

ವಿಚಾರಣೆ ವೇಳೆ, 4 ಕೋ. ರೂ.ಗೂ ಹೆಚ್ಚು ಸಾಲದಲ್ಲಿದ್ದೇನೆ. ಅಡಿಕೆ ನೀಡಿದವರಿಗೆ ಹಣ ಕೊಡಲಾಗದ ಸ್ಥಿತಿಯಲ್ಲಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *