ಸಾಗರ : ಸುಮಾರು 60ಕ್ಕೂ ಹೆಚ್ಚು ಸಣ್ಣ ಅಡಿಕೆ ವ್ಯಾಪಾರಿಗಳಿಗೆ ಅಂದಾಜು 4 ಕೋ. ರೂ. ವಂಚಿಸಿದ್ದ ಆರೋಪದಲ್ಲಿ ನಗರದ ಅಜೀಂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮೂಲತಃ ನೆಹರು ನಗರದ ಮದೀನಾ ಮಸೀದಿ ಪಕ್ಕದ ನಿವಾಸಿಯಾಗಿದ್ದ ಅಜೀಂ ಬೆಂಗಳೂರಿನಲ್ಲಿ ಖಾಸಗಿ ಚಿಟ್ಫಂಡ್ ಒಂದರಲ್ಲಿ ಕೆಲಸ ಮಾಡುತ್ತಿದ್ದ.
ಕೊರೊನಾ ಕಾಲದಲ್ಲಿ, ಅಂದರೆ 2020ರಲ್ಲಿ ಸಾಗರಕ್ಕೆ ಬಂದು ಸಣ್ಣದಾಗಿ ಅಡಿಕೆ ವ್ಯವಹಾರ ಆರಂಭಿಸಿದ್ದ. ಜತೆಯಲ್ಲಿ ಆನ್ಲೈನ್ ಜೂಜಾಟ ಆಡುವ ಅಭ್ಯಾಸವಿತ್ತು ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಈತ ಇಲ್ಲಿನ ಸಣಪುಟ್ಟ ವ್ಯಾಪಾರಿಗಳಿಂದ ಉದ್ರಿ ಲೆಕ್ಕದಲ್ಲಿ ಖರೀದಿಸಿ, ಬೇರೆಯವರಿಗೆ ಮಾರುತ್ತಿದ್ದ. ಆನ್ಲೈನ್ ಜೂಜಾಟದ ಅಭ್ಯಾಸವಿದ್ದ ಈತ ವ್ಯಾಪಾರದಲ್ಲಿ ಬಂದ ಲಾಭವನ್ನು ಅದರಲ್ಲಿ ಕಳೆದು ಕೊಳ್ಳುತ್ತಿದ್ದ. ಕಳೆದ 7-8 ತಿಂಗಳಿಂದ ಜೂಜಾಟದಿಂದ ನಿರಂತರ ನಷ್ಟವಾಗಿ ಸಾಲದ ಮೊತ್ತವೂ ಕೋಟಿ ಲೆಕ್ಕದಲ್ಲಿ ಬೆಳೆದಿತ್ತು. ಅಡಿಕೆ ಪಡೆದವರಿಗೆ ಹಣ ನೀಡಲು ಸಾಧ್ಯವಾಗದ ಪರಿಸ್ಥಿತಿಗೆ ಬಂದಿದ್ದ. ಅಡಿಕೆ ಕೊಟ್ಟವರು ಮನೆಗೆ ಬರುತ್ತಿದ್ದಂತೆ ಕೆಲವು ದಿನ ತಲೆ ಮರೆಸಿಕೊಂಡು ಬೆಂಗಳೂರು, ಬಿಹಾರ ಎಂದೆಲ್ಲ ಓಡಾಡಿ ಸಾಗರಕ್ಕೆ ಮರಳಿದ್ದ. ಇದನ್ನೇ ಕಾದಿದ್ದ ಹಲವು ಅಡಿಕೆ ವ್ಯಾಪಾರಿಗಳು ಪೊಲೀಸರಿಗೆ ದೂರು ನೀಡಿದ್ದರು.
ವಿಚಾರಣೆ ವೇಳೆ, 4 ಕೋ. ರೂ.ಗೂ ಹೆಚ್ಚು ಸಾಲದಲ್ಲಿದ್ದೇನೆ. ಅಡಿಕೆ ನೀಡಿದವರಿಗೆ ಹಣ ಕೊಡಲಾಗದ ಸ್ಥಿತಿಯಲ್ಲಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು.
ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.”
ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ.
ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ.
ಮುಂದಿನ ಹಂತದಲ್ಲಿ ನಾವು ಔಟ್ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ.
ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು.
– ರಫ಼ಿ ರಿಪ್ಪನ್ ಪೇಟೆ
ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್