ಮಾರ್ಚ್ 17ಕ್ಕೆ ಶಿವಮೊಗ್ಗಕ್ಕೆ ಬರಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ
ಶಿವಮೊಗ್ಗ ಲೋಕಸಭೆ ಚುನಾವಣೆಯ ಕಣ ಕುತೂಹಲಕ್ಕೆ ಕಾರಣವಾಗಿದೆ. ಚುನಾವಣಾ ಕಾವನ್ನು ಮತ್ತಷ್ಟು ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ವಾರಾಂತ್ಯದಲ್ಲಿ ಆಗಮಿಸಲಿದ್ದಾರೆ. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ತವರು ಜಿಲ್ಲೆಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ.ಮಾರ್ಚ್ 15ರಿಂದ ಮೂರು ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಚುನಾವಣಾ ಪ್ರಚಾರವನ್ನು ನಡೆಸಲಿದ್ದಾರೆ.
ಮಾರ್ಚ್ 17ರ ಭಾನುವಾರ ಮೋದಿ ಯಡಿಯೂರಪ್ಪ ತವರು ಜಿಲ್ಲೆಯಲ್ಲಿ ಪ್ರಚಾರ ನಡೆಸಿ ಮತಯಾಚನೆ ಮಾಡಲಿದ್ದಾರೆ.
ಸಂಸದರ ಮಾಹಿತಿ: ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 17ರಂದು ಶಿವಮೊಗ್ಗ ನಗರಕ್ಕೆ ಭೇಟಿ ನೀಡುವ ಕುರಿತು ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಫೇಸ್‌ಬುಕ್ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ.
‘ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ Narendra Modi ಅವರು ಬರುವ ಮಾರ್ಚ್ 17ರ ಭಾನುವಾರದಂದು ಚುನಾವಣಾ ಪ್ರಚಾರಾರ್ಥ ಶಿವಮೊಗ್ಗಕ್ಕೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ, ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ಇಂದು ಪಕ್ಷದ ಪ್ರಮುಖ ಮುಖಂಡರೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಕಾರ್ಯಕ್ರಮದ ಪೂರ್ವಭಾವಿ ಚರ್ಚೆ ನಡೆಸಲಾಯಿತು’ ಎಂದು ಪೋಸ್ಟ್ ಹಾಕಿದ್ದಾರೆ. ಬಿ. ವೈ. ರಾಘವೇಂದ್ರ ಅವರ ಜೊತೆ ಶಾಸಕರಾದ ಎಸ್. ಎನ್.ಚನ್ನಬಸಪ್ಪ, ಮುಖಂಡರಾದ ಜ್ಞಾನೇಶ್ವರ, ನಾಗರಾಜ್, ಕುಮಾರಸ್ವಾಮಿ ಹಾಗೂ ಹಲವು ಬಿಜೆಪಿ ಕಾರ್ಯಕರ್ತರು ಕಾರ್ಯಕ್ರಮ ನಡೆಯುವ ಸ್ಥಳದ ಪರಿಶೀಲನೆ ನಡೆಸಿದರು.
ಸದ್ಯದ ಮಾಹಿತಿ ಪ್ರಕಾರ ಮಾರ್ಚ್ 15ರಂದು ನರೇಂದ್ರ ಮೋದಿ ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಕ್ಷೇತ್ರಗಳ ಸಮಾವೇಶ. ಮಾರ್ಚ್ 17ರಂದು ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳ ಸಮಾವೇಶ, ಮಾರ್ಚ್ 18ರಂದು ಬೀದರ್, ಕಲಬುರಗಿ ಕ್ಷೇತ್ರಗಳ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮಾರ್ಚ್ 15 ರಿಂದ 19ರ ತನಕ ನರೇಂದ್ರ ಮೋದಿ 5 ರಾಜ್ಯಗಳಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿಯೂ ಬಿಜೆಪಿಯಿಂದ ಬಿ.ವೈ. ರಾಘವೇಂದ್ರ ಕಣಕ್ಕಿಳಿಯುವುದು ಖಚಿತವಾಗಿದೆ. ಕಾಂಗ್ರೆಸ್ ಪಕ್ಷ ಈಗಾಗಲೇ ಗೀತಾ ಶಿವರಾಜ್ ಕುಮಾರ್ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ.ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗದ ವ್ಯಾಪ್ತಿಗೆ ಉಡುಪಿ ಜಿಲ್ಲೆಯ ಬೈಂದೂರು ಸಹ ಸೇರುತ್ತದೆ. ಶಿವಮೊಗ್ಗ ಕ್ಷೇತ್ರದಲ್ಲಿ ಶಿವಮೊಗ್ಗ ನಗರ (ಬಿಜೆಪಿ), ಶಿವಮೊಗ್ಗ ಗ್ರಾಮಾಂತರ (ಜೆಡಿಎಸ್), ಭದ್ರಾವತಿ (ಕಾಂಗ್ರೆಸ್), ಸೊರಬ (ಕಾಂಗ್ರೆಸ್), ಸಾಗರ (ಕಾಂಗ್ರೆಸ್), ತೀರ್ಥಹಳ್ಳಿ (ಬಿಜೆಪಿ), ಶಿಕಾರಿಪುರ (ಬಿಜೆಪಿ), ಉಡುಪಿ ಜಿಲ್ಲೆಯ ಬೈಂದೂರು (ಬಿಜೆಪಿ) ಶಾಸಕರು ಇದ್ದಾರೆ.2004ರಿಂದ ಬಿಜೆಪಿ ಭದ್ರಕೋಟೆಯಾಗಿದೆ ಶಿವಮೊಗ್ಗ ಜಿಲ್ಲೆ.
ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಶಿಕಾರಿಪುರದ ಶಾಸಕ ಬಿ. ವೈ. ವಿಜಯೇಂದ್ರ ಆಯ್ಕೆಯಾದ ಬಳಿಕ ಕ್ಷೇತ್ರದ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಯಡಿಯೂರಪ್ಪ ಮತ್ತು ಎಸ್.ಬಂಗಾರಪ್ಪ ಕುಟುಂಬಗಳ ನಡುವೆ ಶಿವಮೊಗ್ಗದಲ್ಲಿ ಈ ಬಾರಿಯೂ ಪ್ರತಿಷ್ಠೆಗಾಗಿ ಹೋರಾಟ ನಡೆಯಲಿದೆ.2019ರ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿಯ ಬಿ. ವೈ. ರಾಘವೇಂದ್ರ 729,872 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದ ಮಧು ಬಂಗಾರಪ್ಪ 506,512 ಮತಗಳನ್ನು ಪಡೆದು ಸೋಲು ಕಂಡಿದ್ದರು.ಈ ಬಾರಿ ರಾಜಕೀಯ ಚಿತ್ರಣವೇ ಬದಲಾಗಿದೆ.