ಕೆ.ಎಸ್. ಈಶ್ವರಪ್ಪ ನಿವಾಸಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರ ದೌಡು : ನಾಯಕರಿಗೆ ಡೋಂಟ್ ಕೇರ್ ಎಂದ ಈಶ್ವರಪ್ಪ
ಶಿವಮೊಗ್ಗದಲ್ಲಿ ಬಿಜೆಪಿ ಪ್ರಹಸನ ಮುಂದಿವರಿದಿದೆ. ಮಗನಿಗೆ ಹಾವೇರಿ ಗದಗ ಟಿಕೆಟ್ ತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ಈಶ್ವರಪ್ಪ, ಬಂಡಾಯದ ಬಾವುಟ ಹಾರಿಸಿದ್ದಾರೆ. ಇದೀಗ ಈಶ್ವರಪ್ಪ ಮನವೊಲಿಕೆಗೆ ಬಿಜೆಪಿ ನಾಯಕರು ಮುಂದಾಗಿದ್ದು, ಆದರೆ ಈಶ್ವರಪ್ಪ ಸಂಧಾನಕ್ಕೆ ಬಂದವರನ್ನು ಭೇಟಿಯಾಗದೆ ತನ್ನ ವಿರೋಧ ತೋರಿದ್ದಾರೆ.
ರವಿವಾರ ಶಿವಮೊಗ್ಗ ನಗರದ ಗುಂಡಪ್ಪ ಶೆಡ್ ನಲ್ಲಿರುವ ಈಶ್ವರಪ್ಪ ನಿವಾಸಕ್ಕೆ ಕೇಂದ್ರದ ನಾಯಕರು ಭೇಟಿ ನೀಡಿದ್ದಾರೆ. ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ಅವರು ಸಂಧಾನಕಾರರಾಗಿ ಬಂದಿದ್ದಾರೆ. ಅವರ ಜೊತೆ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಹಾಗೂ ಎಂಎಲ್ ಸಿ ಡಿಎಸ್ ಅರುಣ್ ಭೇಟಿ ನೀಡಿದ್ದಾರೆ.
ಸೋಮವಾರ ಶಿವಮೊಗ್ಗಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಅದಕ್ಕೂ ಮುನ್ನ ಈಶ್ವರಪ್ಪ ಬಂಡಾಯ ಶಮನವಾಗುವುದು ಬಿಜೆಪಿಗೆ ಮುಖ್ಯವಾಗಿದೆ. ಆದರೆ ರಾಧಾ ಮೋಹನ್ ದಾಸ್ ಅಗರವಾಲ್ ಸಭೆ ನಡುವೆಯೇ ಈಶ್ವರಪ್ಪ ಎದ್ದು ಹೊರ ಹೋಗಿದ್ದಾರೆ. ಈಗ ಬರುತ್ತೇನೆ ಎಂದು ಮನೆಯಿಂದ ಹೊರ ಹೋದ ಈಶ್ವರಪ್ಪ ಬಳಿಕ ಮಾತುಕತೆಗೆ ಬಾರದೆ ವಿರೋಧ ತೋರಿದ್ದಾರೆ. ಹಲವು ಹೊತ್ತು ಕಾದು ಕುಳಿತ ನಾಯಕರು ಈಶ್ವರಪ್ಪ ಮನೆಯಿಂದ ಹೊರ ನಡೆದರು.
ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಕೆಎಸ್ ಈಶ್ವರಪ್ಪ ಬಿಎಸ್ ವೈ ಕುಟುಂಬ ವಿರುದ್ಧ ಟೀಕೆ ಮಾಡಿದ್ದರು. “ಬಿ.ಎಸ್. ಯಡಿಯೂರಪ್ಪ ಹಾಗೂ ವಿಜಯೇಂದ್ರ ಕಪಿ ಮುಷ್ಟಿಯಲ್ಲಿರುವ ಪಕ್ಷವನ್ನು ತಪ್ಪಿಸಲು ಸ್ಪರ್ಧೆ ಮಾಡುತ್ತಿದ್ದೇನೆ. ನೊಂದ ಕಾರ್ಯಕರ್ತರ ಧ್ವನಿಯಾಗಿ ನಾನು ಚುನಾವಣೆ ಸ್ಪರ್ಧಿಸುತ್ತೇನೆ. ಯಾರೇ ಬಂದು ಹೇಳಿದರೂ ನಾನು ಚುನಾವಣೆ ಎದುರಿಸುತ್ತೇನೆ. ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಮಕ್ಕಳಿನಿಂದ ಪಕ್ಷ ಮುಕ್ತವಾಗಬೇಕು. ಹಾಗಾಗಿ ಚುನಾವಣೆ ಸ್ಪರ್ಧೆ ಮಾಡುತ್ತೇನೆ. ಯಡಿಯೂರಪ್ಪ ನೇತೃತ್ವದಲ್ಲಿ ತುಂಬಾ ಸೀಟು ಗೆಲ್ಲುತ್ತೇವೆ ಎಂದುಕೊಂಡಿದ್ದಾರೆ. ಬಿಜೆಪಿಯಲ್ಲಿ ಆಗುತ್ತಿರುವ ಕೆಟ್ಟ ರಾಜಕಾರಣ ಕೇಂದ್ರದ ನಾಯಕರಿಗೆ ಗೊತ್ತಾಗಬೇಕು ಎಂದು ಹೇಳಿದ್ದರು.
ಮೋದಿ ನನ್ನ ದೇವರು. ಪ್ರಾಣ ಹೋದರೂ ಮೋದಿ ಬಿಡಲಿಲ್ಲ. ಆದರೆ ನಾನು ರಾಘವೇಂದ್ರ ವಿರುದ್ಧ ಸ್ಪರ್ಧೆ ಮಾಡುತ್ತಿರುವುದು. ಹಾಗಾಗಿ ನಾಳೆಯ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ಗೆದ್ದ ಮೇಲೆ ಮೋದಿ ಅವರನ್ನು ಭೇಟಿ ಮಾಡುತ್ತೇನೆ. ನಾಳೆ ಅವರನ್ನು ಭೇಟಿ ಮಾಡಲ್ಲ. ಚುನಾವಣೆ ಮಾಡುತ್ತಿದ್ದೇನೆ. ಹಾಗಾಗಿ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದರು.
		 
                         
                         
                         
                         
                         
                         
                         
                         
                         
                        
