ಹೊಸನಗರದ 15 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ 25 ವರ್ಷದ ಯುವಕನಿಗೆ 20 ವರ್ಷ ಕಠಿಣ ಸಜೆ
ಹೊಸನಗರ(Hosanagara) ತಾಲೂಕಿನ 15 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ 25 ವರ್ಷದ ಯುವಕನಿಗೆ ಶಿವಮೊಗ್ಗ(shivamogga)ದ ಫಾಸ್ಟ್‌ಟ್ರ್ಯಾಕ್ ಸ್ಪೆಷಲ್ ಕೋರ್ಟ್ 20 ವರ್ಷಗಳ ಕಠಿಣ ಸಜೆ ವಿಧಿಸಿದೆ.
ಹೊಸನಗರ ತಾಲೂಕು ಗ್ರಾಮ ಒಂದರಲ್ಲಿ 2022ರಲ್ಲಿ ಆರೋಪಿ ಯುವಕ ಶಾಲೆಗೆ ಹೋಗುತ್ತಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ.ಇದರಿಂದ ಬೇಸತ್ತ ಬಾಲಕಿ ಮನೆಯವರಿಗೆ ತಿಳಿಸಿದ್ದಳು. ಇದಾದ ಬಳಿಕ ಬಾಲಕಿ ಹೊಸನಗರ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ದೂರು ದಾಖಲಿಸಿದ್ದಳು.
ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಯುವಕನನ್ನು ಬಂಧಿಸಿ, ಅತನ ವಿರುದ್ಧ ಶಿವಮೊಗ್ಗದ ಫಾಸ್ಟ್‌ಟ್ರ್ಯಾಕ್ ಸ್ಪೆಷಲ್ ಕೋರ್ಟ್ -1 ರಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಈ ಕೇಸ್‌ನ ವಿಚಾರಣೆ ನಡೆಸಿದ ಸ್ಪೆಷಲ್ ಕೋರ್ಟ್ ನ್ಯಾಯಾಧೀಶರಾದ ಲತಾ ಅವರು, ಯುವಕನ ವಿರುದ್ಧದ ಆರೋಪಗಳು ಸಾಬೀತಾದ ಕಾರಣ ಆತನಿಗೆ 20 ವರ್ಷಗಳ ಕಠಿಣ ಸಜೆಯನ್ನು ಘೋಷಿಸಿದರು. ಅದೇ ರೀತಿ 50,000 ರೂಪಾಯಿ ದಂಡವನ್ನೂ ವಿಧಿಸಿದರು.
ಒಂದೊಮ್ಮೆ ದಂಡ ಕಟ್ಟುವುದಕ್ಕೆ ವಿಫಲರಾದರೆ, 4 ತಿಂಗಳ ಸಾದಾ ಕಾರಾಗೃಹ ಶಿಕ್ಷೆಯನ್ನು 20 ವರ್ಷದ ಕಠಿಣ ಸಜೆಯ ಜೊತೆಗೆ ಅನುಭವಿಸಬೇಕು ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ. ಸಂತ್ರಸ್ತೆ ಬಾಲಕಿಯ ಪರವಾಗಿ ಸರ್ಕಾರಿ ವಕೀಲ ಹರಿಪ್ರಸಾದ್ ವಾದ ಮಂಡಿಸಿದ್ದರು.