ಗೃಹಿಣಿಗೆ 16.42 ಲಕ್ಷ ವಂಚನೆ – ದೂರು ದಾಖಲು
ಷೇರು ವ್ಯವಹಾರದಲ್ಲಿ ಅತ್ಯಧಿಕ ಲಾಭವಿದೆ ಎಂದು ನಂಬಿಸಿ ಶಿವಮೊಗ್ಗದ ಗೃಹಿಣಿಯೊಬ್ಬರಿಗೆ 16.42 ಲಕ್ಷ ರೂ. ವಂಚಿಸಿರುವ ಘಟನೆ ವರದಿಯಾಗಿದೆ.
ಟ್ರೇಡಿಂಗ್ ಕುರಿತು ಕೋಚಿಂಗ್ ನೀಡಲಾಗುತ್ತದೆ ಎಂದು ಇನ್‌ಸ್ಟಾಗ್ರಾಂನಲ್ಲಿ ಪೇಜ್ ಒಂದರಲ್ಲಿ ಪ್ರಕಟಿಸಲಾಗಿತ್ತು.
ಅಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದ್ದ ಶಿವಮೊಗ್ಗದ ಗೃಹಿಣಿ (ಹೆಸರು ಗೌಪ್ಯ) ಒಂದು ವಾಟ್ಸಾಪ್ ಗ್ರೂಪ್ ಸೇರಿದ್ದರು ಎನ್ನಲಾಗಿದೆ. ಅಲ್ಲಿ ಟ್ರೇಡಿಂಗ್ ಎಂದರೇನು, ಲಾಭ ಪಡೆಯುವುದು ಹೇಗೆ ಎಂಬ ಮಾಹಿತಿ ತಿಳಿಸಲಾಯಿತು. ನಿತ್ಯ ಒಂದೊಂದು ವಿಷಯ ತಿಳಿಸುತ್ತ ಮಹಿಳೆಯಿಂದ ಹಣ ಹೂಡಿಕೆ ಮಾಡಿಸಿಕೊಳ್ಳಲಾಗಿತ್ತು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಜ.12 ರಿಂದ ಫೆ.6ರ ಮಧ್ಯೆ ನಾರ್ಮಲ್ ಟ್ರೇಡಿಂಗ್‌ನಲ್ಲಿ ಶೇ.10ರಷ್ಟು ಲಾಭ, ಬ್ಲಾಕ್ ಟ್ರೇಡಿಂಗ್‌ನಲ್ಲಿ ಶೇ.200ರಷ್ಟು ಲಾಭ ಎಂದು ನಂಬಿಸಲಾಗಿತ್ತು. ಅಂತೆಯೇ ಮಹಿಳೆಯಿಂದ 16.42 ಲಕ್ಷ ರೂ. ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಲಾಗಿದೆ ಎಂದು ಹೇಳಲಾಗಿದೆ.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.