ಗೊಂದಲದ ಗೂಡಾದ ಕೊಡಚಾದ್ರಿ ಕಾಲೇಜಿನ ಎನ್‌ಎಸ್‌ಎಸ್(NSS) ಶಿಬಿರ
ಹೊಸನಗರದ(Hosanagara) ಕೊಡಚಾದ್ರಿ(kodachadri) ಸರಕಾರಿ ಪ್ರಥಮದರ್ಜೆ ಕಾಲೇಜು ತಾಲೂಕಿನ ಮಾರುತಿಪುರದಲ್ಲಿ (maruthipura) ಹಮ್ಮಿಕೊಂಡಿರುವ NSS ಶಿಬಿರವು ಗೊಂದಲದ ಗೂಡಾಗಿ ಮಾರ್ಪಟ್ಟಿದೆ.
ಸದಾ ಒಂದಿಲ್ಲೊಂದು ಯಡವಟ್ಟಿನ ಮೂಲಕ ಸುದ್ದಿಯಲ್ಲಿರುವ ಕೊಡಚಾದ್ರಿ ಕಾಲೇಜಿನ NSS ಶಿಬಿರದ ಅವ್ಯವಸ್ಥೆಯ ಬಗ್ಗೆ ಸಾರ್ವಜನಿಕ ವಲಯಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಜನವರಿ 12ರಿಂದ ಆರಂಭಗೊಂಡು ಜ.18ರ ವರೆಗೆ ನಡೆಯಲಿರುವ ಈ ಶಿಬಿರದ ಕೆಲ ಅವ್ಯವಸ್ಥೆಗಳು ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿವೆ.
ಸ್ಥಳೀಯರ ಸಂಪರ್ಕವಿಲ್ಲ:
ರಾಷ್ಟ್ರೀಯ ಸೇವಾ ಯೋಜನೆಯ ಮೂಲತತ್ವವೇ ಸಮುದಾಯ ಮೊದಲು, ವೈಯಕ್ತಿಕ ಬಳಿಕ ಎನ್ನುವ ಧ್ಯೇಯದೊಂದಿಗೆ ಕೆಲಸ ನಿರ್ವಹಿಸುವುದು. ಆದರೆ ಈ ಬಾರಿ ಕೊಡಚಾದ್ರಿ ಕಾಲೇಜು ಹಮ್ಮಿಕೊಂಡಿರುವ ಶಿಬಿರದಲ್ಲಿ ಸ್ಥಳೀಯ ಗಣ್ಯರಿಗೆ ಯಾವುದೇ ಕಾರ್ಯಕ್ರಮಗಳಲ್ಲಿ ಮಾನ್ಯತೆ ನೀಡಲಾಗಿಲ್ಲ. ಉಪನ್ಯಾಸ, ಗೋಷ್ಠಿಗಳಿಗೆ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ. ಸ್ಥಳೀಯ ಹಳೆಯ ವಿದ್ಯಾರ್ಥಿಗಳು, ಅಂತರಕಾಲೇಜು ಶಿಬಿರದಲ್ಲಿ ಭಾಗವಹಿಸಿದ ಹಿರಿಯ ಶಿಬಿರಾರ್ಥಿಗಳನ್ನು ಸಹಾ ಕಡೆಗಣಿಸಿರುವುದು ಅಸಮಧಾನ ತಂದಿದೆ. ಆಹ್ವಾನ ಪತ್ರಿಕೆಯ ತುಂಬ ಕಾಲೇಜು ಸಮಿತಿ ಸದಸ್ಯರು, ಉಪನ್ಯಾಸಕರು ಹಾಗೂ ಮಾರುತಿಪುರ ಗ್ರಾಮ ಪಂಚಾಯಿತಿ ಸದಸ್ಯರ ಹೆಸರುಗಳೇ ರಾರಾಜಜಿಸುತ್ತಿವೆ.
ಇನ್ನೂ ಕೊಡಚಾದ್ರಿ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುವ ಕೆಲ ನೇರ ನಿಷ್ಠುರ ನುಡಿ ಉಪನ್ಯಾಸಕರ ಹೆಸರನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ. ಅತಿಥಿ ಉಪನ್ಯಾಸಕರನ್ನು ಆಹ್ವಾನ ಪತ್ರಿಕೆಯಲ್ಲಿ ಉಪನ್ಯಾಸಕರು ಎಂದೇ ಪ್ರಕಟಿಸಿ ನಿಯಮ ಉಲ್ಲಂಘಿಸಲಾಗಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರ ಹೆಸರನ್ನೇ ಕೈ ಬಿಟ್ಟು ಶಿಷ್ಠಾಚಾರ ಉಲ್ಲಂಘಿಸಲಾಗಿದೆ.
ಒಂದೇ ಕಟ್ಟಡದಲ್ಲಿ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು:
ಮಾರುತಿಪುರದ ಪ್ರೌಢಶಾಲೆಯ ಒಂದೇ ಕಟ್ಟಡದಲ್ಲಿ ಪುರುಷ ಹಾಗೂ ಮಹಿಳಾ ಶಿಬಿರಾರ್ಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಶೌಚಾಲಯಗಳ ಬಳಕೆಗೆ ವಿದ್ಯಾರ್ಥಿನಿಯರಿಗೆ ಸಮಸ್ಯೆಯಿದ್ದು, ಸುರಕ್ಷತೆಯ ಆತಂಕ ವಿದ್ಯಾರ್ಥಿನಿರ ಪೋಷಕರಿಗೆ ಎದುರಾಗಿದೆ. ಸಮೀಪದಲ್ಲಿಯೇ ಪ್ರಾಥಮಿಕ ಶಾಲೆಯ ಕಟ್ಟಡ ಇದ್ದರೂ, ಅದನ್ನು ಬಳಸಿಕೊಳ್ಳಲು ಮುಂದಾಗಾದಿರುವುದು ವಿಪರ್ಯಾಸ.
ಅಲ್ಲದೇ ಮೊದಲೆರಡು ದಿನ ಇದ್ದ ಮಹಿಳಾ ಶಿಬಿರಾಧಿಕಾರಿ ಬಳಿಕ ಕಾಲೇಜಿನ ತರಗತಿಗಳಿಗೆ ಹಾಜರಾಗಿದ್ದಾರೆ.
ಮಾದ್ಯಮದವರಿಗೂ ಆಹ್ವಾನವಿಲ್ಲ:
ಯೋಜನೆ ಶಾಲೆಯಲ್ಲಿ ಹಮ್ಮಿಕೊಂಡಿದ್ದರೂ, ಪೂರ್ವಭಾವಿ ಸಭೆ ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ಆಯೋಜಿಸಲಾಗಿತ್ತು. ಶಾಲಾ ಸಮಿತಿಯ ಪ್ರಮುಖರಿಗೇ ಸಭೆಯ ಮಾಹಿತಿ ನೀಡಿಲ್ಲ. ಆರೋಗ್ಯ ತಪಾಸಣಾ ಶಿಬಿರ, ವಿಶೇಷ ಉಪನ್ಯಾಸ ಗಳು ಶಿಬಿರದ ಭಾಗವಾಗಿದ್ದು, ವ್ಯಾಪಕ ಪ್ರಚಾರವಿಲ್ಲದೇ ಕಾರ್ಯಕ್ರಮಗಳು ಕಳೆಗುಂದಿವೆ. ಮಾದ್ಯಮದರಿಗೆ ಸಹ ಸೌಜನ್ಯಕ್ಕೂ ಆಹ್ವಾನ ನೀಡಲಾಗಿಲ್ಲ.
ಮಕ್ಕಳ ಅಧ್ಯಯನಕ್ಕೆ ಅಡ್ಡಿ:
ಪ್ರೌಢಶಾಲೆಯಲ್ಲಿ ಶಿಬಿರ ಆಯೋಜಿಸಿದ್ದು, ವಸತಿ ಯೋಜನೆಗಾಗಿ ಒಂದು ತರಗತಿಯನ್ನು ಹೊಸ ಕಟ್ಟಡಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ಅಲ್ಲದೇ ಪಕ್ಕದ ಕಟ್ಟಡದಲ್ಲಿಯೇ ಎಸ್‌ಎಸ್‌ಎಲ್‌ಸಿ ತರಗತಿ ಪಾಠ ಪ್ರವಚನಗಳು ನಡೆಯುತ್ತಿದ್ದು, ಸದ್ಯದಲ್ಲೇ ಪೂರ್ವಭಾವಿ ಪರೀಕ್ಷೆಗಳು ನಡೆಯುತ್ತಿವೆ. ಶಿಬಿರವನ್ನು ಅಲ್ಲಿಯೇ ಆಯೋಜಿಸಿರುವುದು ಅಧ್ಯಯನಕ್ಕೆ ತೊಡಕಾಗುವ ಆತಂಕ ಮಕ್ಕಳ ಪೋಷಕರನ್ನು ಕಾಡಿದೆ.
ವಿದ್ಯಾರ್ಥಿಗಳಿಗೆ ನಾಗರಿಕ ಸಮಾಜದ ಜವಾಬ್ದಾರಿಗಳನ್ನು ನಿಭಾಯಿಸಬೇಕಾದ ಅನುಭವ ಪಡೆಯುವ ಉದ್ದೇಶದೊಂದಿಗೆ ನಡೆಯುವ ನಡೆಯಬೇಕಾದ ಎನ್‌ಎಸ್‌ಎಸ್ ಶಿಬಿರಗಳು ಜನಮಾನಸಕ್ಕೆ ಯಾವ ಸಂದೇಶ ನೀಡುತ್ತಿವೆ ಎಂಬ ಆತ್ಮಾವಲೋಕನ ಕಾಲೇಜು ಆಡಳಿತ ಮಾಡಿಕೊಳ್ಳಬೇಕಿದೆ.
ರಾಷ್ಟ್ರೀಯ ಸೇವಾ ಯೋಜನೆಯಡಿಯಲ್ಲಿ ಗ್ರಾಮದ ಜನತೆಯ ಸಹಕಾರ ಸಹಯೋಗವಿಲ್ಲದೇ ಶಿಬಿರ ನಡೆಸುತ್ತಿರುವುದು ಸಮಂಜಸವಲ್ಲ. ಇಂತಹ ಶಿಬಿರಗಳಿಂದ ಗುಣಾತ್ಮಕ ಫಲಿತಾಂಶ ಹೊರಬರಬೇಕು. ಕೇವಲ ಕಾಟಾಚಾರದ ಶಿಬಿರ ಮಾಡಿ ಅನುದಾನ ಪೋಲು ಮಾಡುವಂತಾಗಬಾರದು ಎನ್ನುವ ಅಭಿಪ್ರಾಯ ಸ್ಥಳೀಯವಾಗಿ ಕೇಳಿಬಂದಿದೆ.