ಕರ್ನಾಟಕ ರಾಜ್ಯ NPS ನೌಕರರ ಸಂಘ ಹೊಸನಗರ ಘಟಕದ ವತಿಯಿಂದ ಶಾಸಕ ಬೇಳೂರು ಗೋಪಾಲಕೃಷ್ಣ ರವರಿಗೆ ಮನವಿ ಸಲ್ಲಿಕೆ
ಕರ್ನಾಟಕ ರಾಜ್ಯ KSGNPSEA ಸಂಘದ ನಿರ್ದೇಶನದಂತೆ ಸಂಘದ ನಡೆ ಜನಪ್ರತಿನಿಧಿಗಳ ಕಡೆ ಅಭಿಯಾನದಡಿಯಲ್ಲಿ ಇಂದು ರಿಪ್ಪನ್‌ಪೇಟೆಯಲ್ಲಿ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲ ಕೃಷ್ಣರವರನ್ನು ಭೇಟಿ ಮಾಡಿ ಮುಂಬರುವ ಸಚಿವ ಸಂಪುಟ ಸಭೆಯಲ್ಲಿ NPS ರದ್ದು ಮಾಡುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡುವಂತೆ ಹೊಸನಗರ ತಾಲೂಕು ಎನ್ಪಿಎಸ್ ನೌಕರರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ಶಾಸಕರು ಸಕಾರಾತ್ಮಕ ಸ್ಪಂದಿಸಿ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆಯುವುದಾಗಿ ಹಾಗೂ ನಮ್ಮ ಸರ್ಕಾರ ನಿಶ್ಚಿತಾ ಹಳೆ ಪಿಂಚಣಿಯನ್ನು ಮರು ಜಾರಿ ಮಾಡಲು ಬದ್ದವಾಗಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ರಾಜ್ಯ ಘಟಕದ ಉಪಾಧ್ಯಕ್ಷರಾದ
ಡಾ. ರಜನಿಕಾಂತ ಎಸ್. ಟಿ., ತಾಲೂಕು ಅಧ್ಯಕ್ಷರಾದ ಮಾಲತೇಶ ಎಂ ಹಾಗೂ ತಾಲೂಕು ಪದಾಧಿಕಾರಿಗಳು ಹಾಗೂ ತಾಲೂಕು NPS ನೌಕರರು ಉಪಸ್ಥಿತರಿದ್ದರು.
ಮನವಿ ಪತ್ರದ ಸಾರಾಂಶ :
ವಿಷಯ: ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ NPS ರದ್ದುಗೊಳಿಸಿ, ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವ ಕುರಿತು.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘವು ದಿನಾಂಕ:13.10.2022 ರಿಂದ ಒಂದು ತಿಂಗಳು OPS ಸಂಕಲ್ಪ ಯಾತ್ರೆಯನ್ನು ಹಾಗೂ 14 ದಿನಗಳ ಕಾಲ OPS ಜಾರಿಗಾಗಿ ಫ್ರೀಡಂ ಪಾರ್ಕ್‌ನಲ್ಲಿ ಅಹೋ ರಾತ್ರಿ ಧರಣಿ ನಡೆಸಲಾಗಿತ್ತು ಹಾಗೂ ಜನವರಿ ತಿಂಗಳಿಂದ ಮೂರು ತಿಂಗಳ ಕಾಲ Vote for OPS ಅಭಿಯಾನವನ್ನು ನಡೆಸಲಾಗಿತ್ತು. ಈ ಅವಧಿಯಲ್ಲಿ ತಾವು ಹಾಗೂ ತಮ್ಮ ಪಕ್ಷ ನಿರಂತರವಾಗಿ ನಮ್ಮ ನೋವಿಗೆ ಸ್ಪಂದಿಸಿರುತ್ತೀರಿ.
ಮುಂದುವರೆದು, ತಮ್ಮ ಸರ್ಕಾರವು ಅಧಿಕಾರ ವಹಿಸಿಕೊಂಡ ತಕ್ಷಣ ನಮ್ಮ ಪದಾಧಿಕಾರಿಗಳೊಂದಿಗೆ ದಿನಾಂಕ:13.06.2023 ರಂದು ಗ್ರಹ ಕಛೇರಿ ಕೃಷ್ಣಾದಲ್ಲಿ ಮಾನ್ಯ ಮುಖ್ಯಮಂತ್ರಿಯವರು ಸಭೆ ನಡೆಸಿ, NPS ಯೋಜನೆಯನ್ನು ರದ್ದುಗೊಳಿಸುವ ಭರವಸೆಯನ್ನು ನೀಡಿದ್ದರು. ಮುಂದುವರೆದು, NPS ನೌಕರರ ಸಮಾವೇಶ ನಡೆಸಲು ಸೂಕ್ತ ದಿನಾಂಕ ನೀಡುವುದಾಗಿ ಸಹ ತಿಳಿಸಿರುತ್ತಾರೆ. ನುಡಿದಂತೆ ನಡೆದ ತಮ್ಮ ಸರ್ಕಾರದ ಭದ್ರತೆ ಹಾಗೂ ಸರ್ಕಾರಿ ನೌಕರರ ನೋವಿಗೆ ಸ್ಪಂದಿಸಿರುವ ತಮಗೆ ಸಂಘವು ಋಣಿಯಾಗಿರುತ್ತದೆ. ಮುಖ್ಯಮಂತ್ರಿಯವರು ದಿನಾಂಕ:06.01.2024 ರಂದು ಸಂಘದ ಪದಾಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮುಂದಿನ ಸಂಪುಟ ಸಭೆಯಲ್ಲಿ NPS ಯೋಜನೆಯ ರದ್ದತಿಯ ವಿಷಯವನ್ನು ಸಂಪುಟದ ಸಹದ್ಯೋಗಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿರುತ್ತಾರೆ.
ಪ್ರಸ್ತುತ, ತಾವು ರಾಜ್ಯದ ಶಾಸಕರಾಗಿ ನೊಂದವರಿಗೆ ಸಾಮಾಜಿಕ ನ್ಯಾಯ ಒದಗಿಸುವ ಹಂಬಲದೊಂದಿಗೆ ತಮ್ಮ ಸರ್ಕಾರ ನೀಡಿರುವ ಐದು ಭರವಸೆಗಳನ್ನು ಯಶಸ್ವಿಯಾಗಿ ಈಡೇರಿಸಿರುತ್ತೀರಿ. ಇದು ಜನಮನ್ನಣೆಗೆ ಪಾತ್ರವಾಗಿದೆ. ಪುಸ್ತುತ 2 ಲಕ್ಷದ 65 ಸಾವಿರ NPS ನೌಕರರ ಹಾಗೂ ಅಷ್ಟ ಸಂಖ್ಯೆಯ ನಿಗಮ ಮಂಡಳಿ ಅನುದಾನಿತ ಹಾಗೂ ಸ್ವಾಯತ್ತ ಸಂಸ್ಥೆಗಳ ನೌಕರರು NPS ರದ್ಧತಿಯ ಘೋಷಣೆಯನ್ನು ಎದುರು ನೋಡುತ್ತಿದ್ದೇವೆ. NPS ರದ್ದತಿಯಿಂದ ಮೇಲಿನ ಐದು ಜನಪರ ಭರವಸೆಗಳನ್ನು ಅನುಷ್ಠಾನಗೊಳಿಸಲು ವಾರ್ಷಿಕವಾಗಿ ರೂ.1875,00 ಕೋಟಿಗಳ ಅನುದಾನ ಲಭ್ಯವಾಗಲಿದೆ. ಹಾಗೇಯೇ NSDLನಲ್ಲಿ ಶೇಖರಣೆಯಾಗಿರುವ ರೂ.18655.00 ಕೋಟಿಗಳಷ್ಟು ಹಣ ಅಭಿವೃದ್ಧಿ ಕಾರ್ಯಗಳಿಗೆ ಲಭ್ಯವಾಗಲಿದೆ (ಮಾಹಿತಿಯನ್ನು ಲಗತ್ತಿಸಿದೆ). ಆದುದರಿಂದ, ರಾಜಸ್ಥಾನ, ಛತ್ತಿಸ್ಕಡ, ಜಾರ್ಖಂಡ್ ಹಾಗೂ ಹಿಮಾಚಲ ಪ್ರದೇಶದ ಸರ್ಕಾರಗಳು NPS ಯೋಜನೆಯನ್ನು ರದ್ದುಗೊಳಿಸಿರುವಂತೆಯೇ ಕರ್ನಾಟಕದಲ್ಲಿಯೂ NPS ಯೋಜನೆಯನ್ನು ರದ್ದುಗೊಳಿಸುವಂತೆ ತಮ್ಮನ್ನು ಸಂಘವು ವಿನಯಪೂರ್ವಕವಾಗಿ ಒತ್ತಾಯಿಸುತ್ತದೆ.