ಶರಾವತಿ ನದಿಯಿಂದ ಹೊಸನಗರ, ಸಾಗರಕ್ಕೆ 24 ಗಂಟೆ ನೀರು ಕೊಡಲಿ ಆಮೇಲೆ ಬೆಂಗಳೂರಿಗೆ ತೆಗೆದುಕೊಂಡು ಹೋಗಲಿ – ಶಾಸಕ ಬೇಳೂರು

ಶರಾವತಿ ನದಿಯಿಂದ ಹೊಸನಗರ, ಸಾಗರಕ್ಕೆ 24 ಗಂಟೆ ನೀರು ಕೊಡಲಿ ಆಮೇಲೆ ಬೆಂಗಳೂರಿಗೆ ತೆಗೆದುಕೊಂಡು ಹೋಗಲಿ – ಶಾಸಕ ಬೇಳೂರು 

ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಬೇಕಾದರೆ ಸಾಗರ, ಹೊಸನಗರ ಭಾಗದ ಜನರಿಗೆ ದಿನದ 24 ಗಂಟೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದಾಗಿ ರಾಜ್ಯ ಸರ್ಕಾರವು ‘ಅಗ್ರಿಮೆಂಟ್’ ಮಾಡಿಕೊಳ್ಳಲಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಸಾಗರ ಪಟ್ಟಣದ ಸೊರಬ ರಸ್ತೆ ಮತ್ತು ಬೈಪಾಸ್ ರಸ್ತೆ ಕಾಮಗಾರಿಯನ್ನು ಶನಿವಾರ ಪರಿಶೀಲನೆ ಮಾಡಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ನಾಡಿಗೆ ಬೆಳಕು ನೀಡಲು ಸರ್ವಸ್ವವನ್ನೂ ಕಳೆದುಕೊಂಡಿರುವ ಸಂತ್ರಸ್ತರು ಸಾಗರ, ಹೊಸನಗರ ಭಾಗದಲ್ಲಿದ್ದಾರೆ. ಅವರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವುದು ಸರ್ಕಾರದ ಆದ್ಯ ಕರ್ತವ್ಯ ಎಂದರು.

‘ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಪ್ರಸ್ತಾಪವಿದೆ ಎನ್ನುವ ಚರ್ಚೆ ನಡೆಯುತ್ತಿದೆ. ಕುಡಿಯುವ ನೀರು ಕೊಡಲು ಆಗುವುದಿಲ್ಲ ಎಂದು ಹೇಳಲು ಬರುವುದಿಲ್ಲ. ಆದರೆ ಶರಾವತಿ ನದಿ ನೀರನ್ನು ಪುಕ್ಕಟ್ಟೆಯಾಗಿ ಬೆಂಗಳೂರಿಗೆ ಹರಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ನಮ್ಮ ಕೆಲವು ಬೇಡಿಕೆಗಳನ್ನು ಈಡೇರಿಸಿದರೆ ನೀರು ಹರಿಸುವ ಬಗ್ಗೆ ಯೋಚಿಸಲಾಗುತ್ತದೆ’ ಎಂದು ಹೇಳಿದರು.

ಈಗಾಗಲೆ ಕುಡಿಯುವ ನೀರಿನ ಸಮಸ್ಯೆ ಎಲ್ಲ ಕಡೆಗಳಲ್ಲಿಯೂ ಇದೆ. ಶರಾವತಿ ನದಿನೀರು ವಿದ್ಯುತ್ ಯೋಜನೆಗೆ ಮಾತ್ರ ಉಪಯೋಗಿಸಿಕೊಳ್ಳಲಾಗುತ್ತಿದ್ದು, ಕೃಷಿ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತಿಲ್ಲ. ನಮ್ಮ ಭಾಗದಲ್ಲಿ ಕುಡಿಯುವ ನೀರಿಗೆ ಶರಾವತಿ ವರದಾತೆಯಾಗಿದ್ದಾಳೆ. ಏಕಾಏಕಿ ನದಿನೀರು ಒಯ್ಯುತ್ತೇವೆ ಎಂದರೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಹಾಗೆಂದು ಕುಡಿಯುವ ನೀರು ಕೊಡುವುದಿಲ್ಲ ಎಂದು ಹೇಳಲು ಸಹ ಬರುವುದಿಲ್ಲ’ ಎಂದು ತಿಳಿಸಿದರು.

ಸೊರಬ ರಸ್ತೆ ಮತ್ತು ಬೈಪಾಸ್ ರಸ್ತೆ ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ. ಅಗಲೀಕರಣ ಸಂದರ್ಭದಲ್ಲಿ ಕೆಲವು ಕಡೆಗಳಲ್ಲಿ ಜಾಗದ ಅಗತ್ಯ ಇದ್ದು, ಅವರಿಗೆ ಜಾಗ ಬಿಟ್ಟು ಕೊಡುವಂತೆ ಮನವೊಲಿಸಲಾಗುತ್ತದೆ. ಜಾಗ ಬಿಟ್ಟುಕೊಟ್ಟವರಿಗೆ ಸೂಕ್ತ ಪರಿಹಾರ ನಗರಸಭೆಯಿಂದ ಕೊಡಲಾಗುತ್ತದೆ. ರಸ್ತೆ ಇಕ್ಕೆಲಗಳಲ್ಲಿ ಅನಗತ್ಯ ಮಳಿಗೆ ಹಾಕಲು ಅವಕಾಶ ಕೊಡುವುದಿಲ್ಲ. ನಗರಸಭೆಯಿಂದ ಫುಡ್ ಕೋರ್ಟ್ ನಿರ್ಮಿಸಲಾಗುತ್ತದೆ. ರಾಜ್ಯ ಸರ್ಕಾರ ವಿಶೇಷ ಅನುದಾನ ನೀಡುತ್ತಿದ್ದು, ಫುಡ್ ಕೋರ್ಟ್ ಸೇರಿದಂತೆ ಅಗತ್ಯ ಯೋಜನೆ ರೂಪಿಸಲಾಗುತ್ತದೆ ಎಂದು ಹೇಳಿದರು.

Leave a Reply

Your email address will not be published. Required fields are marked *