ತುಮರಿ ಸೇತುವೆಯು ನಾಡಿಗೆ ಬೆಳಕು ನೀಡಲು ಸರ್ವಸ್ವವನ್ನು ಕಳೆದುಕೊಂಡ ಜನರ ಬದುಕಿನ ಸಂಪರ್ಕ ಸೇತು – ಶಾಸಕ ಬೇಳೂರು
ತುಮರಿ ಮತ್ತು ಹಸಿರುಮಕ್ಕಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸೇತುವೆ ಕೇವಲ ಸೇತುವೆಯಲ್ಲ. ನಾಡಿಗೆ ಬೆಳಕು ನೀಡಲು ಸರ್ವಸ್ವವನ್ನು ಕಳೆದುಕೊಂಡ ಜನರ ಬದುಕಿನ ಸಂಪರ್ಕ ಸೇತು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.
ಸಾಗರ ತಾಲೂಕಿನ ಅಂಬಾರಗೋಡ್ಲು ದಡದಲ್ಲಿ ಅಂಬಾರಗೋಡ್ಲುವಿನಿಂದ ಕಳಸವಳ್ಳಿಗೆ ಸಂಪರ್ಕಿಸುವ ಲಾಂಚ್ ಮಾರ್ಗದ ರ‍್ಯಾಂಪ್ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿ ಅವರು ಮಾತನಾಡಿ, ತುಮರಿ ಸೇತುವೆ ನಿರ್ಮಾಣ ಜನರ ಕನಸು ಅದನ್ನು ಶೀಘ್ರವಾಗಿ ಮುಗಿಸುವತ್ತ ಸಂಬಂಧಪಟ್ಟ ಗುತ್ತಿಗೆದಾರ ಕಂಪನಿ ಗಮನ ಹರಿಸಬೇಕು. ಕಾಮಗಾರಿ ಬೇಗ ಮುಗಿಸುವಂತೆ ಸಂಬಂಧಪಟ್ಟ ಸಚಿವರು ಇಲಾಖೆ ಮೇಲೆ ಒತ್ತಡ ಹೇರಲಾಗಿದ್ದು ಅವರು ಪೂರಕವಾಗಿ ಸ್ಪಂದಿಸಿದ್ದಾರೆ.
ಕಾಮಗಾರಿ ರಾತ್ರಿ ಹಗಲು ನಡೆಯುತ್ತಿದ್ದು ಶೀಘ್ರದಲ್ಲಿಯೆ ಸೇತುವೆ ಲೋಕಾರ್ಪಣೆಯಾಗುವ ಸಾಧ್ಯತೆ ಇದೆ. ತುಮರಿ ಸೇತುವೆ ಹಿನ್ನೀರ ಭಾಗದ ಜನರ ಹೋರಾಟಕ್ಕೆ ಸಂದ ಪ್ರತಿಫಲವಾಗಲಿದೆ ಎಂದು ಹೇಳಿದರು.
ಬೇಸಿಗೆ ಸಂದರ್ಭದಲ್ಲಿ ಹಿನ್ನೀರು ಕಡಿಮೆಯಾಗಿ ಲಾಂಚ್ ನಿಲ್ಲಿಸಲು ಸಹ ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯರು ನನ್ನ ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಲಾಂಚ್ ನಿಲ್ಲಲು ಸಮಸ್ಯೆಯಾಗಬಾರದು ಎಂದು ಅಗತ್ಯ ಇರುವ ಕಡೆಗಳಲ್ಲಿ ರ‍್ಯಾಂಪ್ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಗತ್ಯ ಸಂದರ್ಭದಲ್ಲಿ ಜನರನ್ನು ಒಂದು ದಡದಿಂದ ಮತ್ತೊಂದು ದಡಕ್ಕೆ ಕರೆದೊಯ್ಯಲು ಮಿನಿ ಬೋಟ್ ಬಳಕೆ ಮಾಡಲು ಸಹ ಸೂಚನೆ ನೀಡಲಾಗಿದೆ ಎಂದು ಹೇಳಿದರು.