Ripponpete | ಸರ್ಕಾರಿ ಶಾಲೆ ಉಳಿಸಿ, ಬೆಳೆಸುವ ಆಂದೋಲನ ಅಗತ್ಯ
ಸರ್ಕಾರಿ ಶಾಲೆಗಳ ಸ್ಥಿತಿ ಅತ್ಯಂತ ದಯನೀಯ ಪರಿಸ್ಥಿತಿಯಲ್ಲಿದೆ. ಈ ಶಾಲೆಗಳನ್ನು ಉಳಿಸುವುದರೊಂದಿಗೆ, ಸಮಗ್ರ ಅಭಿವೃದ್ಧಿಗೆ ಚಿಂತನೆ ನಡೆಸುವ ಅಗತ್ಯವಿದೆ ಎಂದು ಸಿವಿಲ್ ಇಂಜಿನಿಯರ್ ರಾಘವೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.
ಹೊಸನಗರ ತಾಲೂಕಿನ ನೇರಲಮನೆ ಸರ್ಕಾರಿ ಶಾಲೆಯಲ್ಲಿ ಪೋಸ್ಟ್ ಮ್ಯಾನ್ ಸುದ್ದಿ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ಶಾಲೆಯ ಅಭಿಮಾನ, ಸುಣ್ಣ ಬಣ್ಣದ ಅಭಿಯಾನ ಕಾರ್ಯಕ್ರಮಕ್ಕೆ ಗೋಡೆಗೆ ಬಣ್ಣ ಹೊಡೆಯುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಇಂದಿನ ಸರ್ಕಾರ ಶಾಲೆಗಳ ಸ್ಥಿತಿಗತಿಯ ಬಗ್ಗೆ ಚಿಂತನೆ ನಡೆಸಿ ಆಲೋಚಿಸುವ ಅಗತ್ಯವಿದೆ. ಸರ್ಕಾರಿ ಶಾಲೆಗಳು ಬಡ ಮಕ್ಕಳ ವಿದ್ಯಾರ್ಜನೆ ಕೇಂದ್ರಗಳಾಗಿವೆ. ಈ ಶಾಲೆಗಳ ಸಂರಕ್ಷಣೆ ಬಹುಸಂಖ್ಯಾತ ಜನರ ಅಭ್ಯಾಸಕ್ಕೆ ಪೂರಕವಾಗಿವೆ. ಆದರೆ ಸರ್ಕಾರಿ ಶಾಲೆಗಳ ಸ್ಥಿತಿ ಅತ್ಯಂತ ಗಂಭೀರವಾಗುತ್ತಿದೆ. ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಶಾಲೆಗಳಿಗೆ ಹೊಸ ಚೈತನ್ಯ ನೀಡುವ ಮತ್ತು ಸಮಗ್ರ ಅಭಿವೃದ್ಧಿಗೆ ಆಂದೋಲನ ನಡೆಸುವ ಮಹತ್ವದ ನಿರ್ಧಾರಕ್ಕೆ ಸಂಬಂಧಿಸಿದಂತೆ ಚಿಂತನೆ ನಡೆಸಬೇಕಾಗಿದೆ” ಎಂದರು.
ಸಾಮಾಜಿಕ ಕಾರ್ಯಕರ್ತ ರಮೇಶ್ ಎನ್ ಮಾತನಾಡಿ ಸರ್ಕಾರ ಶಾಲೆಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಿದರೆ, ಮುಚ್ಚುವ ಸ್ಥಿತಿಯಲ್ಲಿರುವ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿಕೊಳ್ಳಬಹುದಾಗಿದೆ.ಸರ್ಕಾರದ ಸವಲತ್ತುಗಳು ಹಾಗೂ ದಾನಿಗಳು ನೀಡುವ ಸವಲತ್ತುಗಳನ್ನು ಬಳಸಿಕೊಂಡು ಸರ್ಕಾರಿ ಶಾಲೆಗಳಲ್ಲಿ ಉತ್ತಮ ವಾತಾವರಣ ಉಂಟು ಮಾಡುವ ಮೂಲಕ ಮಕ್ಕಳ ದಾಖಲಾತಿ ಹೆಚ್ಚಿಸಿಕೊಂಡು ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕಾಗಿದೆ ಎಂದರು.
ಪೋಸ್ಟ್ ಮ್ಯಾನ್ ನ್ಯೂಸ್ ಬಳಗದ ವತಿಯಿಂದ ಹೊಸನಗರ ತಾಲೂಕಿನ 21 ಶಾಲೆಗಳಿಗೆ ಉಚಿತವಾಗಿ ಸುಣ್ಣಬಣ್ಣ ಮಾಡಿಕೊಡುವ ಅಭಿಯಾನದಲ್ಲಿ ಈಗಾಗಲೇ ನಾಲ್ಕು ಶಾಲೆಗಳಿಗೆ ಬಣ್ಣದ ರಂಗು ನೀಡಲಾಗಿದೆ. ಪೋಸ್ಟ್ ಮ್ಯಾನ್ ಬಳದ ಈ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಈ ಸಂಧರ್ಭದಲ್ಲಿ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆಯ ರಫ಼ಿ ರಿಪ್ಪನ್‌ಪೇಟೆ ,ಎಸ್ ಡಿ ಎಂಸಿ ಅಧ್ಯಕ್ಷರಾದ ಬಾಲಚಂದ್ರ , ಶಾಲೆಯ ಮುಖ್ಯೋಪಾಧ್ಯಾಯ ದಾನೇಶಪ್ಪ ,ಶಿಕ್ಷಕಿ ವನಜ ಹಿರಿಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ,ಎಸ್ ಡಿಎಂಸಿ ಸದಸ್ಯರೂ ಸೇರಿದಂತೆ ಗ್ರಾಮಸ್ಥರು ಇದ್ದರು.