WhatsApp Channel Join Now
Telegram Channel Join Now

RIPPONPET|ಕಸ ವಿಲೇವಾರಿ ಘಟಕವಾಯ್ತು ಸರ್ಕಾರಿ ಶಾಲೆ – ಖಾಸಗಿ ಶಾಲೆಗಳ ಮಾಫ಼ಿಯಾಕ್ಕೆ ನಶಿಸಿದ ಸುಂದರ ಶಾಲೆ – 


🔴🔵ವರದಿ – ರಫ಼ಿ ರಿಪ್ಪನ್‌ಪೇಟೆ

ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಒಂದೇ ಒಂದು ಹೊಸ ಸರ್ಕಾರಿ ಶಾಲೆಯನ್ನೂ ತೆರೆದಿಲ್ಲ. ಸಾವಿರಾರು ಸಂಖ್ಯೆಯಲ್ಲಿ ಖಾಸಗಿ ಶಾಲೆಗಳೂ ತಲೆ ಎತ್ತುತಿವೆ. ಹಣ ಹೊಂದಿಸಲು ಆಗದವರೂ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವಂತಹ ವಾತಾವರಣ ನಿರ್ಮಾಣಗೊಳ್ಳಬೇಕು. ಅದಕ್ಕಾಗಿ ಸಂಸತ್ತು, ವಿಧಾನಸಭೆ ಬೇಕಾದಷ್ಟು ಕಾಯ್ದೆಗಳನ್ನು ಮಾಡಿವೆ ನಿಜ. ಆದರೆ, ಅನುಷ್ಠಾನದ ವಿಷಯದಲ್ಲಿ ಇಚ್ಛಾಶಕ್ತಿಯ ಕೊರತೆಯಿಂದ ಸರ್ಕಾರಿ ಶಾಲೆಗಳು ಒಂದೊಂದಾಗಿ ಅವನತಿಯತ್ತ ಸಾಗುತ್ತಿದೆ.
ಹೌದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಪಂ ವ್ಯಾಪ್ತಿಯ ದೂನ ಗ್ರಾಮದ ಸರ್ಕಾರಿ ಶಾಲೆ ಖಾಸಗಿ ಶಿಕ್ಷಣ ಸಂಸ್ಥೆಯವರ ಪಿತೂರಿಯಿಂದ ವಿದ್ಯಾರ್ಥಿಗಳ ಕೊರತೆಯುಂಟಾಗಿ ಶಾಲೆ ಮುಚ್ಚಲ್ಪಟ್ಟು 3 ವರ್ಷಗಳಾಗಿವೆ.


ಕಳೆದ 25 ವರ್ಷಗಳ ಹಿಂದೆ ದೂನ ಗ್ರಾಮದ ಟೀಕಪ್ಪ ಗೌಡ ಎಂಬ ಶಿಕ್ಷಣ ಪ್ರೇಮಿಯೊಬ್ಬರು ಗ್ರಾಮೀಣ ಪ್ರದೇಶದ ಮಕ್ಕಳು ವಿದ್ಯಾಬ್ಯಾಸದಿಂದ ಹಿಂದುಳಿಯಬಾರದು ಎನ್ನುವ ಉದ್ದೇಶದಿಂದ ದೂನ ಗ್ರಾಮದ ಶಿವಮೊಗ್ಗ – ಹೊಸನಗರ ಮುಖ್ಯ ಹೆದ್ದಾರಿಯಲ್ಲಿರುವ ಎರಡು ಎಕರೆ ತಮ್ಮ ಸ್ವಂತ ಜಾಗವನ್ನು ದೇಣಿಗೆ ನೀಡಿದ್ದರು.


23 ವರ್ಷ ಈ ಶಾಲೆಯಲ್ಲಿ ಅತಿ ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾಬ್ಯಾಸ ನಡೆಸಿದ್ದಾರೆ. ಶಾಲೆ ಸುಸಜ್ಜಿತವಾಗಿ ಸುತ್ತಲೂ ಕಾಂಪೌಂಡ್ ,ಸುಸಜ್ಜಿತ ಕಟ್ಟಡ ಎಲ್ಲವೂ ಇತ್ತು ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಈ ಶಾಲೆಯ ಮೇಲೆ ಖಾಸಗಿ ಶಾಲೆ ಮಾಫ಼ಿಯಾ ದೊರೆಗಳ ಕಣ್ಣು ಬಿದ್ದು ಇಂದು ವಿದ್ಯಾರ್ಥಿಗಳಿಲ್ಲದೇ ಶಾಲೆ ಮುಚ್ಚಲ್ಪಟ್ಟಿದೆ.ದೂನ ಗ್ರಾಮದ 40 ಕ್ಕೂ ಹೆಚ್ಚು ಮಕ್ಕಳು ರಿಪ್ಪನ್‌ಪೇಟೆಯ ವಿವಿಧ ಖಾಸಗಿ ಶಾಲೆಗೆ ತೆರಳುತಿದ್ದಾರೆ ಅವರಿಗೆ ಮನೆ ಬಾಗಿಲಿಗೆ ಸ್ಕೂಲ್ ಬಸ್ ನ ವ್ಯವಸ್ಥೆಯು ಇದೆ…


 ನವೆಂಬರ್ 01 ರಂದು ದೂನ ಗ್ರಾಮದ ಯುವಕರು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಬಹಳ ಅದ್ದೂರಿಯಿಂದ ನಡೆಸಿದರು ಅಷ್ಟೇ ಕಾಳಜಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪೋಷಕರ ಮನವೊಲಿಸಿ ಮಕ್ಕಳನ್ನು ದೂನ ಶಾಲೆಗೆ ಸೇರಿಸುವಲ್ಲಿ ಪ್ರಯತ್ನಿಸಿ ಶಾಲೆಯನ್ನು ಪುನಃ ತೆರೆಸುವ ನಿಟ್ಟಿನಲ್ಲಿ‌ ಮುಂದಡಿ ಇಡುತ್ತಾರ ಕಾದು ನೋಡ ಬೇಕಾಗಿದೆ..

ಕಸ ವಿಲೇವಾರಿ ಘಟಕವಾಯ್ತು ಮುಚ್ಚಿದ ಶಾಲೆ :

ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಲ್ಪಟ್ಟಿದ್ದ ಶಾಲೆಯನ್ನು ಅರಸಾಳು ಗ್ರಾಪಂ ಕಸ ವಿಲೇವಾರಿ ಘಟಕವನ್ನಾಗಿಸಿ ಶಾಲೆಗೆ ಕೊನೆಯ ಮೊಳೆ ಹೊಡೆಯಲು ಹೊರಟಿದೆ.
ಅರಸಾಳು ಗ್ರಾಪಂ ನ ಹಳೆಯ ಕಟ್ಟಡದಲ್ಲಿ ಈಗಾಗಲೇ ಸ್ವಚ್ಚ ಸಂಕೀರ್ಣ ಘಟಕವಿದ್ದರೂ ದೂನ ಗ್ರಾಮದಲ್ಲಿ ವಿದ್ಯಾರ್ಥಿಗಳಿಲ್ಲದೇ ಮುಚ್ಚಿರುವ ಸರ್ಕಾರಿ ಶಾಲೆಯಲ್ಲಿ ಕಸವನ್ನು‌ ಹಾಕುವ ಮೂಲಕ ಭವಿಷ್ಯದ ಸಾವಿರಾರು ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ತಣ್ಣೀರೆರಚಿಸುವ ಕೆಲಸಕ್ಕೆ ನಾಂದಿ ಹಾಡಿದ್ದಾರೆ….

ಒಟ್ಟಾರೆಯಾಗಿ ಮುಂದಿನ ದಿನಗಳಲ್ಲಿ ಪೋಸ್ಟ್ ಮ್ಯಾನ್ ನ್ಯೂಸ್ ಬಳಗ ದೂನ ಗ್ರಾಮದ ಪ್ರಜ್ಞಾವಂತ ಯುವಕರ ಸಹಕಾರದೊಂದಿಗೆ ಶಾಲೆ ಉಳಿಸುವ ನಿಟ್ಟಿನಲ್ಲಿ ಪೋಷಕರ ಮನವೊಲಿಸುವ ಅಭಿಯಾನ ನಡೆಸುವ ಮೂಲಕ ನಮ್ಮ ಸರ್ಕಾರಿ ಶಾಲೆಯನ್ನು ಉಳಿಸಲು ಯತ್ನಿಸುತ್ತೇವೆ ಆದ್ದರಿಂದ “ಶಾಲೆಯನ್ನು ಶಾಲೆಯಾಗಿರಿಸಲು” ಅರಸಾಳು ಗ್ರಾಮಾಡಳಿತ ಶಾಲಾ ಕಟ್ಟಡದಲ್ಲಿ ಶೇಖರಿಸಿರುವ ಕಸವನ್ನು ತೆರವುಗೊಳಿಸಬೇಕಾಗಿದೆ.

ನಮ್ಮ ತಂದೆಯವರಾದ ದೂನ ಟೀಕಪ್ಪ ಗೌಡರು ಗ್ರಾಮೀಣ ಮಕ್ಕಳಿಗೆ ಶಿಕ್ಷಣ ದೊರೆಯಲಿ ಎನ್ನುವ ಮಹದಾಸೆಯಿಂದ ಶಾಲೆಗಾಗಿ‌ ಮಾತ್ರ ಭೂಮಿಯನ್ನು ದೇಣಿಗೆ ನೀಡಿರುವುದೇ ಹೊರತು ಅನ್ಯ ಉದ್ದೇಶಕ್ಕಾಗಿಯಲ್ಲ ದಯವಿಟ್ಟು ನಮ್ಮ ತಂದೆಯವರ ಅಭಿಲಾಷೆಗೆ ತಣ್ಣೀರೆರಚಬೇಡಿ….

ಕುಮಾರಸ್ವಾಮಿ ದೂನ ..ಟೀಕಪ್ಪಗೌಡ ರವರ ಪುತ್ರ


ಶಾಲೆ ಮುಚ್ಚಲ್ಪಟ್ಟಿದ್ದರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದು ಶೌಚಾಲಯದಲ್ಲಿ ಮಾತ್ರ ಒಣ ಕಸ ಶೇಖರಿಸುವಂತೆ ಪಂಚಾಯತ್ ನ ಕಸ ಸಂಗ್ರಹ ತಂಡದವರಿಗೆ ತಿಳಿಸಲಾಗಿತ್ತು ಅವರ ಯಡವಟ್ಟಿನಿಂದ ಈ ಘಟನೆ ನಡೆದಿದೆ ಕೂಡಲೇ ಕಸ ತೆರವುಗೊಳಿಸುತ್ತೇವೆ..


ರವಿ.. ಪಿಡಿಓ ಅರಸಾಳು


ದೂನದ ಸರ್ಕಾರಿ ಶಾಲೆಯ ಕೊಠಡಿಯಲ್ಲಿ ಕಸ ಸಂಗ್ರಹಿಸಿರುವ ವಿಚಾರ ನನ್ನ ಗಮನಕ್ಕೆ ಬಂದಿರಲಿಲ್ಲ ಕೂಡಲೇ ಅದನ್ನು ತೆರವುಗೊಳಿಸುವಂತೆ ಪಿಡಿಒ ರವರಿಗೆ ಸೂಚಿಸಿದ್ದೇನೆ….

ನರೇಂದ್ರ ತಾಪಂ ಕಾರ್ಯನಿರ್ವಹಣಾಧಿಕಾರಿ ಹೊಸನಗರ


Leave a Reply

Your email address will not be published. Required fields are marked *