ಓಮಿನಿ ಕಾರಿಗೆ ಡಿಕ್ಕಿಯಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಅಪ್ಪಳಿಸಿದ ಕಾರು
ರಿಪ್ಪನ್‌ಪೇಟೆ ; ನಿಂತಿದ್ದ ಲಾರಿಗೆ ಕಾರೊಂದು ಡಿಕ್ಕಿ ಹೊಡೆದ ಘಟನೆ ಇಂದು ಸಂಜೆ ರಿಪ್ಪನ್‌ಪೇಟೆ – ಹೊಸನಗರ ರಾಜ್ಯ ಹೆದ್ದಾರಿ ಕೋಡೂರಿನಲ್ಲಿ ನಡೆದಿದೆ.
ರಿಪ್ಪನ್‌ಪೇಟೆ ಕಡೆಯಿಂದ ಹೊಸನಗರದ ಕಡೆ ಚಲಿಸುತ್ತಿದ್ದ ಮಾರುತಿ ಎರ್ಟಿಗಾ ಕಾರು (KA15 N 8342) ದಿಢೀರನೆ ರಸ್ತೆಗೆ ಅಡ್ಡ ಬಂದ ಮಾರುತಿ ಓಮ್ನಿ ವಾಹನಕ್ಕೆ ಗುದ್ದಿದ ಪರಿಣಾಮ ಎರ್ಟಿಗಾ ಕಾರಿನ ಟೈರ್ ಸ್ಫೋಟಗೊಂಡಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಹಿಟಾಚಿ ಯಂತ್ರ ತುಂಬಿಕೊಂಡು ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ.
ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು ಅದೃಷ್ಟವಶಾತ್ ಕಾರಿನ ಏರ್ ಬ್ಯಾಗ್ ತೆರೆದುಕೊಂಡಿದ್ದರಿಂದ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಈ ಘಟನೆಯಲ್ಲಿ ಲಾರಿ ಹಾಗೂ ಮಾರುತಿ ಓಮ್ನಿ ವಾಹನದ ಮುಂಭಾಗಕ್ಕೂ ಸಾಕಷ್ಟು ಹಾನಿಯಾಗಿದೆ.
ಹೊಸನಗರ ತಾಲೂಕಿನ ಸೊನಲೆ ಗ್ರಾಮದ ಅಂಬರೀಶ್ ಎಂಬ ಚಾಲಕ ಮಾತ್ರ ಕಾರಿನಲ್ಲಿದ್ದ ಎಂದು ತಿಳಿದುಬಂದಿದೆ. ಈತ ಬೆಂಗಳೂರಿಗೆ ತೆರಳುತ್ತಿದ್ದ ತಮ್ಮ ಸಂಬಂಧಿಯೊಬ್ಬರನ್ನು ಅರಸಾಳು ರೈಲು ನಿಲ್ದಾಣಕ್ಕೆ ಬಿಟ್ಟು ವಾಪಾಸ್ ಆಗುತ್ತಿದ್ದರು ಎಂದು ತಿಳಿದುಬಂದಿದೆ.
ಪಿಎಸ್‌ಐ ಪ್ರವೀಣ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಈ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಾಗಿದೆ.