ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಅವರ ಶಿವಮೊಗ್ಗ ಹಾಗೂ ತೀರ್ಥಹಳ್ಳಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಶಿವಮೊಗ್ಗದ ಶರಾವತಿ ನಗರ ಮತ್ತು ತೀರ್ಥಹಳ್ಳಿ ಪಟ್ಟಣದ ಬೆಟ್ಟಮಕ್ಕಿಯಲ್ಲಿರುವ ಆರ್.ಎಂ. ಮಂಜುನಾಥಗೌಡ ಅವರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸ್ ಭದ್ರತೆಯಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮನೆ ಸುತ್ತಮುತ್ತ ಶಸ್ತ್ರಾಸ್ತ್ರ ಪೊಲೀಸರು ಸುತ್ತುವರೆದಿದ್ದಾರೆ. ಸರ್ಕಾರಿ ಕಾರುಗಳಲ್ಲಿ ಬಂದಿರುವ ಅಧಿಕಾರಿಗಳ ತಂಡ ಆರ್.ಎಂ.ಎಂ. ನಿವಾಸಗಳಲ್ಲಿ ಮಹತ್ವದ ದಾಖಲೆಗಳ ಪರಿಶೀಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಉಳಿದಂತೆ ತಾಲೂಕಿನ ಹಣಗೆರೆಕಟ್ಟೆ ಸಮೀಪದ ಕರಕುಚ್ಚಿ, ಶಿವಮೊಗ್ಗದ ಶಾಂತಿನಗರ, ಸೇರಿ ಹಲವು ಕಚೇರಿ ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
5ಕ್ಕೂ ಹೆಚ್ಚು ವಾಹನಗಳಲ್ಲಿ 15ಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಳಿ ಮಾಡಿದ್ದು, ಪ್ರತ್ಯೇಕ ಫೋರ್ಸ್ ನೊಂದಿಗೆ ಇಡಿ ತಂಡ ಬಂದಿದೆ. ಡಿಸಿಸಿ ಬ್ಯಾಂಕ್ ನಕಲಿ ಬಂಗಾರದ ಹಗರಣ ತನಿಖೆ ಸಂಬಂಧ ಇಡಿ ದಾಳಿ ನಡೆಸಿರುವ ಸಾಧ್ಯತೆ ಇದ್ದು,ಕೆಲ ತಿಂಗಳ ಹಿಂದೆಯೇ ಈ ಸಂಬಂಧ ಡಿಸಿಸಿ ಬ್ಯಾಂಕ್ ನಿಂದ ಮಾಹಿತಿ ಕೇಳಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಇತ್ತೀಚೆಗಷ್ಟೇ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆರ್.ಎಂ. ಮಂಜುನಾಥಗೌಡ ಅಧಿಕಾರ ವಹಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಇಡಿ ದಾಳಿ ನಡೆದಿದೆ.