ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಕೆಂಚನಾಲ ಗ್ರಾಮದ ಜಾಮೀಯಾ ಮಸೀದಿ ಆವರಣದಲ್ಲಿ ಈದ್ ಮಿಲಾದ್ ಸಮಿತಿ ಹಾಗೂ ರಿಪ್ಪನ್‌ಪೇಟೆ ರೋಟರಿ ಕ್ಲಬ್ ಸಹಯೋಗದಲ್ಲಿ ಈದ್ ಮಿಲಾದ್ ಪ್ರಯುಕ್ತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಕೆಂಚನಾಲ ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್ ಮಾತನಾಡಿ, ರಕ್ತದಾನದಿಂದ ಇನ್ನೊಬ್ಬರ ಜೀವ ಉಳಿಸಬಹುದು.ರಕ್ತಕ್ಕೆ ಪರ್ಯಾಯ ಯಾವುದೇ ವಸ್ತು ಇಲ್ಲ. ರಕ್ತದಾನ ಮಾಡುವುದರಿಂದ ಮೂವರಿಗೆ ಜೀವದಾನ ಮಾಡಿದಂತಾಗುತ್ತದೆ. ಇದರಿಂದ ರಕ್ತದಾನಿಗಳ ಆರೋಗ್ಯವೂ ಸುಧಾರಿಸುತ್ತದೆ ಹಾಗಾಗಿ ಆರೋಗ್ಯವಂತ ಎಲ್ಲರೂ ನಿಯಮಿತವಾಗಿ ರಕ್ತದಾನ ಮಾಡಿ ಎಂದು ಹೇಳಿದರು.
ಪ್ರಸ್ತುತ ದಿನಮಾನದಲ್ಲಿ ಸಮಾಜದಲ್ಲಿ ಅಶಾಂತಿ ಮೂಡಿದ್ದು ಯುವ ಪೀಳಿಗೆ ದ್ವೇಷ ಸಮಾಜದತ್ತ ವಾಲುತಿದ್ದು ಯುವಕರನ್ನು ಹೆಚ್ಚು ಹೆಚ್ಚಾಗಿ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸುವುದರಿಂದ ಒಂದು ಸುಂದರವಾದ ಸೌಹಾರ್ದ ಸಮಾಜ ಕಟ್ಟಲು ಸಾಧ್ಯವಾಗುತ್ತದೆ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಆರ್ ಹೆಚ್ ದೇವದಾಸ್ ಮಾತನಾಡಿ ಆರೋಗ್ಯವಂತರು 60 ವರ್ಷಗಳ ತನಕ ರಕ್ತದಾನ ಮಾಡಬಹುದು. ರಕ್ತದಾನದಿಂದ ಆರೋಗ್ಯ ಉತ್ತಮವಾಗಿರುತ್ತದೆ. ಅನೇಕ ರೋಗಗಳಿಂದಲೂ ಮುಕ್ತವಾಗಬಹುದು. ದೇಹದಲ್ಲಿ ಹೊಸ ರಕ್ತ ಉತ್ಪಾದನೆಯಾಗಲಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ರೋಟರಿ ಸಂಸ್ಥಾಪಕ ಅಧ್ಯಕ್ಷ ಎಂ ಬಿ ಲಕ್ಷ್ಮಣಗೌಡ , ಜಾಮೀಯಾ ಮಸೀದಿ ಅಧ್ಯಕ್ಷರಾದ ಅಬ್ದುಲ್ ಘನಿಸಾಬ್ ,ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಎಸ್ ಪಿ, ರೋಟರಿ ಸಂಸ್ಥೆಯ ರಾಧಾಕೃಷ್ಣ ,ರಾಮಚಂದ್ರ ,ಡಾಕಪ್ಪ ,ಗಣೇಶ್ ಕಾಮತ್,ಈದ್ ಮಿಲಾದ್ ಸಮಿತಿ ಅಧ್ಯಕ್ಷ ಫಾಜಿಲ್ , ಮಖಂಡರಾದ ವಜೀರ್ ಸಾಬ್ ,ಖಲೀಲ್ ಷರೀಫ್, ಅಕ್ಬರ್ ,ದೂದ್ ಪೀರ್ , ತಬ್ರೇಜ್ ಹಾಗೂ ಇನ್ನಿತರರಿದ್ದರು