ರಿಪ್ಪನ್‌ಪೇಟೆ : ಮನುಷ್ಯನ ಜೀವನದಲ್ಲಿ ಅನೇಕ ಸಂದರ್ಭಗಳು ಸ್ಪರ್ಧಾತ್ಮಕವಾಗಿ ಬರುವಂಥ ಸನ್ನಿವೇಶಗಳಿವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪರಿಶ್ರಮ ಪಟ್ಟು ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜಾಗಬೇಕು ಎಂದು ನಿವೃತ ಮುಖ್ಯ ಶಿಕ್ಷಕ ಮಂಜಪ್ಪ ಗುಳುಕೊಪ್ಪ ಹೇಳಿದರು.
ಇಲ್ಲಿನ ಸಮೀಪದ ಹುಂಚ ಗ್ರಾಮದಲ್ಲಿ ಹಳೆ ನವೋದಯ ವಿದ್ಯಾರ್ಥಿ ಬಳಗ ಮತ್ತು ಹುಂಚ ಯುವ ತಂಡದ ವತಿಯಿಂದ ತೃತೀಯ ವರ್ಷದ ನವೋದಯ ಮತ್ತು ಮುರಾರ್ಜಿ ಶಾಲೆಯ ಪ್ರವೇಶ ಪರೀಕ್ಷೆಯ – ಉಚಿತ ತರಬೇತಿ ಶಿಬಿರದ ಉದ್ಘಾಟಿಸಿ ಮಾತನಾಡಿದ ಅವರು ಸ್ಪರ್ಧಾತ್ಮಕ ಪರೀಕ್ಷೆಗಳು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿದ್ದು, 5ನೇ ತರಗತಿಯಲ್ಲೇ ಇದನ್ನು ಎದುರಿಸಲು ಉತ್ತಮವಾದ ವೇದಿಕೆ ಕಲ್ಪಿಸಿದ ಹಳೆ ನವೋದಯ ವಿದ್ಯಾರ್ಥಿ ಬಳಗ ಮತ್ತು ಹುಂಚ ಯುವ ತಂಡವನ್ನು ಶ್ಲಾಘಿಸಿದರು”.
ಹೊಂಬುಜ ಮಠದ ಶ್ರೀಗಳಾದ ದೇವೆಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನಂತರ ಶಿಬಿರದ ರೂವಾರಿಗಳಾದ ಪ್ರಕಾಶ್ ಜೋಯ್ಸ್ ಪ್ರಾಸ್ತವಿಕವಾಗಿ ಮಾತನಾಡಿ “ನವೋದಯ ಮತ್ತು ಮೊರಾರ್ಜಿ ವಸತಿ ಶಾಲೆಗಳು.. ಕೇಂದ್ರ ಮತ್ತು ರಾಜ್ಯ ಸರ್ಕಾರದ ಉತ್ತಮ ಯೋಜನೆಗಳಾಗಿದ್ದು.. ನಮ್ಮ ಊರಿನ ಭಾಗದ ಮಕ್ಕಳು ಇದರ ಉಪಯೋಗ ಪಡೆದು.. ಉತ್ತಮ ಶಿಕ್ಷಣ ಪಡೆಯುವ ಮೂಲಕ ಬದುಕು ರೂಪಿಸಿಕೊಳ್ಳಬೇಕು ” ಎಂದು ಹೇಳಿದರು.
ಪ್ರಸಕ್ತ ಶಿಬಿರದ ಯಶಸ್ಸು ಹಾಗೂ ಪ್ರೇರಣೆಯಿಂದ ತರಬೇತಿ ಶಿಬಿರವನ್ನು ಮುಂದಿನ ದಿನಗಳಲ್ಲಿ ಕೋಣಂದೂರು ಮತ್ತು ಶಿಕಾರಿಪುರದ ತಾಲೂಕಿನ ನೆಲವಾಗಿಲು ಗ್ರಾಮಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು
ಇದೇ ಸಂಧರ್ಭದಲ್ಲಿ ದ್ವಿತೀಯ ವರ್ಷದ ಶಿಭಿರದಲ್ಲಿ ಭಾಗಿಯಾದ ಎಲ್ಲಾ ಮಕ್ಕಳಿಗೆ ಅಭಿನಂದನಾ ಪತ್ರ ಮತ್ತು ಪರಿಸರ ಜಾಗೃತಿಗಾಗಿ ನೆಡಲು ಸಸಿಗಳನ್ನು ಕೊಡಲಾಯಿತು.
ಮುಖ್ಯ ಅತಿಥಿಗಳಾದ ಶಿಕ್ಷಕ ಸಂತೋಷ್ ಮಾತನಾಡಿ ನಮ್ಮ ಶಿಭಿರದ ಉದ್ದೇಶ, ಮಕ್ಕಳ ಕಲಿಕಾ ಜ್ಞಾನವನ್ನು ವೃದ್ಧಿಸುವುದು. ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಜ್ಞಾನ, ಸಲಹೆ, ಸೂಚನೆಗಳನ್ನು ಈ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ಮತ್ತು ಪೋಷಕರಲ್ಲಿ ಮನವರಿಕೆ ಮಾಡಿಕೊಡುವುದು” ಎಂದರು.
ನವೋದಯ ಮತ್ತು ಮೊರಾರ್ಜಿ ಉಚಿತ ತರಬೇತಿ ಶಿಬಿರ 2021 ಸ್ಥಾಪಿತವಾಗಿದ್ದು, ಹುಂಚ ವ್ಯಾಪ್ತಿಯ (ಪರೀಕ್ಷೆಗೆ ದಾಖಲಿಸಿದ) ವಿದ್ಯಾರ್ಥಿಗಳಿಗೆ ಉಚಿತವಾಗಿ ನವೋದಯ ಮತ್ತು ಮೊರಾರ್ಜಿ ಶಾಲೆಯ ಪರಿಚಯ, ಆಯ್ಕೆ ಪ್ರಕ್ರಿಯೆ ಮಾಹಿತಿ, ಕೋಚಿಂಗ್, ಮಾದರಿ ಪರೀಕ್ಷೆ, ಕಲಿಕಾ ಸಾಮಗ್ರಿಗಳು, ಸಮಯ ನಿರ್ವಹಣೆ ಮತ್ತು ಇತರೆ ಉಪಯುಕ್ತ ಮಾಹಿತಿಗಳನ್ನು ಉಚಿತವಾಗಿ ಕೊಡಲಾಗುತ್ತಿದೆ ಎಂದರು.
ಪ್ರಥಮ ಮತ್ತು ದ್ವಿತೀಯ ವರ್ಷದ ಶಿಭಿರದಲ್ಲಿ 76 ಮಕ್ಕಳು, 18 ವಿವಿಧ ಶಾಲೆಗಳಿಂದ ಭಾಗವಹಿಸಿದ್ದು, 3 ಮಕ್ಕಳು ನವೋದಯ ಶಾಲೆಗೆ ಮತ್ತು 26 ಮಕ್ಕಳು ಮೊರಾರ್ಜಿ ಶಾಲೆಗೆ ತೇರ್ಗಡೆ ಆಗಿರುತ್ತಾರೆ. ಒಟ್ಟಾರೆ ಶಿಬಿರದಿಂದ 29 ಮಕ್ಕಳು, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಒಟ್ಟು 62.96 ಲಕ್ಷ ಶೈಕ್ಷಣಿಕ ಉಪಯೋಗ ಪಡೆದುಕೊಂಡಿರುತ್ತಾರೆ.
ಶಿಬಿರದ ಮೂಲಕ ಸಾಧನೆ ಮಾಡಿದ ಮಕ್ಕಳು ಮತ್ತು ಪೋಷಕರು ತಮ್ಮ ಸಂತೋಷ ಮತ್ತು ಅನಿಸಿಕೆ ಹಂಚಿಕೊಂಡರು.
ಇದರ ಜೊತೆಗೆ ಶಿಭಿರದ ಸಂಚಾಲಕರಾದ ಅಭಿಷೇಕ್, ಸಂಜಯ್, ವಿನಯ್, ಶ್ರೀಕಾಂತ್, ಲಕ್ಷಣ್ .. ಶಿಕ್ಷಕರಾದ ಸಂತೋಷ್, ನವೀನ್, ಪ್ರಶಾಂತ್, ಆದಿತ್ಯ, ದಿನೇಶ್, ಶಿವಕುಮಾರ್, ಪ್ರಶಾಂತ್ ವಿ, ಅಕ್ಷತಾ.. ಹಳೆ ನವೋದಯ ವಿದ್ಯಾರ್ಥಿಗಳಿಗಳಾದ ಪುನೀತ್, ಕೆ ಎಂ ಸುನಿಲ್, ವಿಕ್ರಮ್ ಉಡುಪ, ರಮ್ಯಾ ರಾವ್.. ಇವರೆಲ್ಲರ ಸಾಮಾಜಿಕ ಕಳಕಳಿ, ಕಾರ್ಯವನ್ನು ಶ್ಲಾಘಿಸಿ, ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಹುಂಚ ಜೈನ ಮಠದ ಕಾರ್ಯ ನಿರ್ವಾಹಕರಾದ ಪ್ರಕಾಶ್ ಮಗದಂ, ಶಿಕ್ಷಕರಾದ ಧರಣೇಶ್, ಕುಮಾರಸ್ವಾಮಿ ಉಪಸ್ಥಿತರಿದ್ದರು.
ಪ್ರಸಕ್ತ ಸಾಲಿನ ಶಿಬಿರಕ್ಕೆ.. ಹುಂಚ ಸುತ್ತಮುತ್ತಲಿನ 20+ ಶಾಲೆಗಳಿಂದ ಒಟ್ಟು 72 ಮಕ್ಕಳು ಶಿಬಿರಕ್ಕೆ ಹೆಸರು ನೋಂದಾಯಿಸಿದ್ದು… ಶಿಬಿರ ಅಕ್ಟೋಬರ್ ತಿಂಗಳಿಂದ ಪ್ರಾರಂಭವಾಗಲಿದ್ದು, ಸತತ ನಾಲ್ಕು ತಿಂಗಳು, ಪ್ರತಿ ಭಾನುವಾರ ಮಕ್ಕಳಿಗೆ ಪ್ರವೇಶ ಪರೀಕ್ಷೆಗೆ ಉತ್ತಮ ತರಬೇತಿ ನೀಡಲಾಗುತ್ತದೆ.