ಶಾಲಾ ಬಾಲಕನ ಬ್ಯಾಗ್ ನಲ್ಲಿ ನಾಗರಾಜ….!!
ರಿಪ್ಪನ್ ಪೇಟೆ : ಸಮೀಪದ ಬಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ ಭುವನ್ ಬ್ಯಾಗಿನಲ್ಲಿ ಸದ್ದಿಲ್ಲದೆ ಮಲಗಿದ್ದ ನಾಗರಾಜ..!
ಶುಕ್ರವಾರ ಬೆಳಗ್ಗೆ ಶಾಲೆಯ ಬೆಲ್ಲು ಹೊಡೆದು ತರಗತಿ ಪ್ರಾರಂಭವಾದಾಗ ನಲಿಕಲಿ ತರಗತಿಯ ಶಿಕ್ಷಕ ಪಾಠ ಓದಲು ಪುಸ್ತಕ ಬ್ಯಾಗಿನಿಂದ ಹೊರ ತೆಗೆಯುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿ, ಹಾಜರಾತಿ ಕರೆಯುತ್ತಿದ್ದರು.ವಿದ್ಯಾರ್ಥಿ ಭುವನ್ ಶಿಕ್ಷಕರ ಅಣತಿಯಂತೆ ಪುಸ್ತಕ ಹೊರತೆಗೆದಾಗ ಖಾಲಿ ಬ್ಯಾಗಿನಲ್ಲಿ ಮಲಗಿದ್ದ ಹಾವನ್ನು ಕಂಡಿದ್ದಾನೆ.
ತನ್ನ ಪಕ್ಕದಲ್ಲಿ ಕುಳಿತಿದ್ದ ಸಹಪಾಠಿ ಆರ್ ಮಣಿಕಂಠ ಅವನಿಗೆ ಬ್ಯಾಗನಲ್ಲಿ ಇರುವ ಹಾವನ್ನು ತೋರಿಸಿದ್ದಾನೆ.ಹಾವನ್ನು ಕಂಡ ತಕ್ಷಣವೇ ಮಣಿಕಂಠಬ್ಯಾಗಿನ ಜಿಪ್ ಎಳೆದು ಹಾವು ಹೊರಬರದಂತೆ ಮಾಡಿದ್ದಾನೆ. ನಂತರ ಬ್ಯಾಗು ಸಮೇತ ಶಿಕ್ಷಕರ ಬಳಿ ಬಂದು ಇದರಲ್ಲಿ ಹಾವು ಇದೆ ಎಂದು ತಿಳಿಸಿದ್ದಾನೆ.
ವಿದ್ಯಾರ್ಥಿಯ ಮಾತಿಗೆ ಚಕಿತರಾದ ಶಿಕ್ಷಕರು ಬ್ಯಾಗನ್ನು ಹೊರತಂದು ತೆರೆದು ನೋಡಿದಾಗ ಅದರಲ್ಲಿ ಸದ್ದಿಲ್ಲದೆ ಸುರುಳಿ ಸುತ್ತಿಕೊಂಡು ಬೇಟೆಗಾಗಿ ಕಾದು ಕುಳಿತ ನಾಗರ ಹಾವನ್ನು ಕಂಡು ಬೆಚ್ಚಿ ಬೀಳುವ ಸರದಿ ಶಿಕ್ಷಕರದಾಗಿತ್ತು.
ಶಾಲೆಯ ಕೂಗಳತೆ ದೂರದಲ್ಲಿದ್ದ ವಿದ್ಯಾರ್ಥಿ ಭುವನ್ ಮನೆಯಿಂದ ಪೋಷಕರನ್ನು ಕರೆಯಿಸಿದ ಶಿಕ್ಷಕರು, ಘಟನೆಯ ನೈಜ್ಯತೆ ಹಾಗೂ ಸಹಪಾಠಿ ಮಣಿಕಂಠನ ಸಮಯ ಪ್ರಜ್ಞೆಯನ್ನು ಪೋಷಕರಿಗೆ ಮನವರಿಕೆ ಮಾಡಿಕೊಟ್ಟು ನಂತರ ಪೋಷಕರ ಸಮ್ಮುಖದಲ್ಲಿ ಬ್ಯಾಗಿನಲ್ಲಿದ್ದ ವಿಷಪೂರಿತ ನಾಗರಹಾವನ್ನು ಶಿಕ್ಷಕ ವೃಂದ ಜೊತೆಗೂಡಿ ಸಮೀಪದ ಕಾಡಿಗೆ ಬಿಟ್ಟು ಬಂದರು.
ಒಟ್ಟಾರೆ ಶಾಲಾ ಬ್ಯಾಗಿನಲ್ಲಿ ಬಂದಿದ್ದ ನಾಗಪ್ಪ ಯಾರಿಗೂ ಗಂಡಾಂತರ ತರದೆ ಸುಖಾಂತ್ಯವಾಗಿ ಕಾಡು ಸೇರಿದ.ವಿದ್ಯಾರ್ಥಿ ಮಣಿಕಂಠನ ಸಮಯಪ್ರಜ್ಞೆಗೆ ಗ್ರಾಮಸ್ಥರು ಹಾಗೂ ಶಿಕ್ಷಕರು ಪ್ರಸಂಶಿಸಿದ್ದಾರೆ.