ಮಾನವೀಯತೆ ಮೆರೆದ ಪಶು ಪರಿವೀಕ್ಷಕ ವಿ ರಂಗಪ್ಪ
ರಿಪ್ಪನ್ ಪೇಟೆ : ಪೊದೆಯೊಂದರಲ್ಲಿ ಐದು ಮರಿಗಳಿಗೆ ಜನ್ಮವಿತ್ತ ಬೀದಿ ನಾಯಿ ಮೂರು ದಿನಗಳ ಒಳಗೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿತ್ತು.ಇನ್ನೂ ಕಣ್ಣು ಬಿಡದ ಆ ಮರಿಗಳಿಗೆ ಹಾಲುಣಿಸುವ ತಾಯಿ ಬಾರದಿದ್ದಾಗ ಹಸಿವಿನಿಂದ ಕಂಗೆಟ್ಟು ತೀರಾ ಹಠ ಮಾಡುವುದನ್ನು ಕಂಡು ದಾರಿ ಹೋಕರು ಗಮನಿಸಿ ಪಟ್ಟಣದ ಪಶು ವೈದ್ಯಕೀಯ ಪರಿವೀಕ್ಷಕ ವಿ ರಂಗಪ್ಪ ಅವರ ಗಮನಕ್ಕೆ ತಂದರು.
ದಿಕ್ಕಿಲ್ಲದ ಆ ಐದು ಮರಿಗಳನ್ನು ಆಸ್ಪತ್ರೆಗೆ ತಂದು ರಟ್ಟಿನ ಬಾಕ್ಸ್ ನಲ್ಲಿ ಅವುಗಳಿಗೆ ರಕ್ಷಣೆ ನೀಡಿ, ಪ್ರತಿನಿತ್ಯ ಸಿರಂಜ್ ಮೂಲಕ ಮೂರು ಹೊತ್ತು ಅವುಗಳಿಗೆ ಹಾಲುಣಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಇವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ.
ಹೊಸನಗರ ತಾಲೂಕಿನಲ್ಲಿ ಸುಮಾರು 25ಕ್ಕೂ ಅಧಿಕ ಪಶು ಆಸ್ಪತ್ರೆಗಳಿದ್ದು ವೈದ್ಯರು ಹಾಗೂ ಪರಿವೀಕ್ಷಕರು ಮತ್ತು ಡಿ ದರ್ಜೆಯ ನೌಕರರ ತನಕ ಕೇವಲ 14 ಜನ ಮಾತ್ರ ನೌಕರರಿದ್ದರೆ, ದಿನನಿತ್ಯದ ಕಾರ್ಯದ ಒತ್ತಡದ ನಡುವೆಯೂ ಮೂರಕ್ಕೂ ಹೆಚ್ಚು ಪಶುವೈದ್ಯ ಆಸ್ಪತ್ರೆಗಳ ಉಸ್ತುವಾರಿಯನ್ನು ಹೊಂದಿರುವ ವೈದ್ಯ ರಂಗಪ್ಪ ಐದು ಬೀದಿ ನಾಯಿಮರಿಗಳಿಗೆ ಪ್ರತಿದಿನ ಮೂರು ಹೊತ್ತು ಹಾಲನ್ನು ಸಿರೇಂಜ್ ಮೂಲಕ ನೀಡುತ್ತಿದ್ದಾರೆ.