ಅಪರಾಧ ಪ್ರಕರಣಗಳಲ್ಲಿ ಜೈಲು ಸೇರಿದವರು ತಮಗೆ ಯಾವಾಗ ಬೇಲ್ ಸಿಗತ್ತೆ, ನಾವು ಯಾವಾಗ ಜೈಲಿನಿಂದ ಹೊರಗಡೆ ಹೋಗ್ತೀವಿ ಅಂತಾ ಕಾಯುತ್ತಿರುತ್ತಾರೆ, ಆದರೆ, ಇದೀಗ ಜಾಮೀನು ಮಂಜೂರಾದ್ರೂ ಕೂಡ ಜೈಲಿನಿಂದ ಹೊರಬರಲು ಆರೋಪಿಗಳು ಹಿಂದೇಟು ಹಾಕುತ್ತಿದ್ದಾರೆ. ಯಾವಾಗ ಬರ್ತೀರಾ ಅಂದ್ರೆ ಈ ಗಣೇಶ ಚತುರ್ಥಿ ಮುಗೀಲಿ ಆಮೇಲೆ ಬಂದರಾಯಿತು ಎನ್ನುತ್ತಿದ್ದಾರೆ.
ಯಾವುದೇ ವ್ಯಕ್ತಿ ಅಪರಾಧ ಪ್ರಕರಣದಲ್ಲಿ ಜೈಲು ಸೇರಿದ್ರೆ ಮೊದಲು ಅವರು ಮಾಡುವುದೇ ಒಳ್ಳೆಯ ವಕೀಲರನ್ನು ಹಿಡಿದು, ಕೇಳಿದಷ್ಟು ಹಣ ಕೊಟ್ಟು ಜಾಮೀನು ಪಡೆಯುವ ಕೆಲಸ. ಈ ಮೂಲಕ ಜೈಲಿನಿಂದ ಹೊರಬರುವುದಕ್ಕೆ ಎದುರು ನೋಡುತ್ತಿರುತ್ತಾನೆ. ಆದ್ರೆ, ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಜೈಲಿನಲ್ಲಿರುವ ಯಾವುದೇ ಆರೋಪಿಗಳು ಕಾರಾಗೃಹದಿಂದ ಹೊರಗೆ ಬರುವುದಕ್ಕೆ ಮನಸ್ಸು ಮಾಡುತ್ತಿಲ್ಲ. ಜಾಮೀನು ಸಿಕ್ಕರೂ ಕೂಡ ಶ್ಯೂರಿಟಿ ಕೊಡುವುದಕ್ಕೆ ಮುಂದೆಕ್ಕೆ ಬರುತ್ತಿಲ್ಲ. ಇದಕ್ಕೆಲ್ಲ ಕಾರಣವಾಗಿರುವುದು ಗೌರಿ ಗಣೇಶ ಹಬ್ಬದ ವಾತಾವರಣ.
ಕಾರಣ ಏನೆಂದು ನೋಡುವುದಾದರೆ, ಈ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ರೌಡಿಗಳ ಮೇಲೆ, ಸಮಾಜಘಾತುಕ ಶಕ್ತಿಗಳ ಮೇಲೆಯಂತೂ ಪೊಲೀಸರು ಹದ್ದಿನ ಕಣ್ಣನ್ನ ಇಟ್ಟೆ ಇರುತ್ತಾರೆ. ಆರೋಪಿಗಳು ಜೈಲಿನಿಂದ ಹೊರಬಂದ ಸಾಕು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮತ್ತೆ ಅವರಿಗೆ ವಾರ್ನಿಂಗ್ ನೀಡುವುದು ಮಾಮೂಲಿ. ಅದರಲ್ಲೂ ಆತ ನಟೋರಿಯಸ್ ರೌಡಿ ಆಗಿದ್ರೆ ಗಡಿಪಾರು ಮಾಡೋದು, ಸಣ್ಣ ಪುಟ್ಟ ಕೇಸ್ಗಳನ್ನ ಹಾಕಿ ಮತ್ತೆ ಜೈಲಿಗೆ ಕಳಿಸೋದು ಸಾಮಾನ್ಯ.
ಹೀಗಾಗಿಯೇ ಜೈಲಿನಲ್ಲಿರುವ ಬಹಳಷ್ಟು ಆರೋಪಿಗಳು ತಮಗೆ ಸದ್ಯ ಜಾಮೀನು ಸಿಗುವುದು ಬೇಡಪ್ಪ ಅಂತ ಬೇಡಿಕೊಳ್ಳುತ್ತಿದ್ದಾರೆ. ಹೇಗಾದರೂ ಗಣಪತಿ ಹಬ್ಬ ಮುಗೀಲಿ ಆಮೇಲೆಯೇ ಜಾಮೀನಿನ ಬಗ್ಗೆ ವಿಚಾರ ಮಾಡೋಣ ಎಂಬ ಮನಸ್ಥಿತಿಗೆ ಬಂದಿದ್ದಾರೆ. ಯಾಕಂದ್ರೆ, ಈಗ ಹಬ್ಬದ ಸಂದರ್ಭದಲ್ಲಿ ಹೊರಗೆ ಹೋದ್ರು ಮತ್ತೆ ಪೊಲೀಸರು ಯಾವುದಾದ್ರು ಒಂದು ಕೇಸ್ ಹಾಕಿ ಜೈಲಿಗೆ ಕಳಿಸುತ್ತಾರೆ. ಹೀಗಾಗಿ, ಹಬ್ಬ ಮುಗಿದು ವಾತಾವರಣ ತಿಳಿಯಾದ ಮೇಲೆ ಜಾಮೀನು ಪಡೆದರಾಯ್ತು ಎಂಬ ಆಲೋಚನೆಯಲ್ಲಿದ್ದಾರೆ. ಜಾಮೀನು ಸಿಕ್ಕವರೂ ಕೂಡ ಹಬ್ಬ ಮುಗಿದ ಮೇಲೆ ಹೊರ ಬರುತ್ತೇವೆ ಎನ್ನುತ್ತಿದ್ದಾರೆ. ಅಲ್ಲಿವರೆಗೂ ನಾವು ಇಲ್ಲಿಯೇ (ಜೈಲಿನಲ್ಲಿ) ಸೇಫ್ ಆಗಿ ಇರತ್ತೇವೆ ಎನ್ನುತ್ತಿದ್ದಾರೆ.
ಶಿವಮೊಗ್ಗ ನಗರ ಹಾಗೂ ಜಿಲ್ಲೆಯಲ್ಲಿಯೂ ಕೂಡ ಕೆಲವು ಆರೋಪಿಗಳಿಗೆ ಜಾಮೀನು ಮಂಜೂರಾಗಿದ್ದರೂ ಕೂಡ ಗಣೇಶ ಹಬ್ಬ ಮುಗಿಯುವವರೆಗೂ ಇಲ್ಲಿಯೆ ಇದ್ದರೆ ಸಾಕು ಎಂದು ರೌಡಿಗಳು ಹಾಗೂ ಕಳ್ಳರು ಹೊರಬರದೆ ಸುಮ್ಮನೆ ಇದ್ದಾರೆ. ಶಿವಮೊಗ್ಗದಲ್ಲಿ ಗಣಪತಿ ಹಬ್ಬದ ನಂತರ ಬಹಳಷ್ಟು ಆರೋಪಿಗಳು ಜೈಲಿನಿಂದ ಹೊರಬರುವವರಿದ್ದಾರೆ. ಅದರಲ್ಲಿ ಗಾಂಜಾ ಪೆಡ್ಲರ್ಗಳು, ಕಳ್ಳತನ ಹಾಗೂ ದರೋಡೆ ಪ್ರಕರಣ ಹಿನ್ನೆಲೆಯಯುಳ್ಳವರು, ಅನೇಕ ಆರೋಪ ಎದುರಿಸುತ್ತಿರುವ ರೌಡಿಗಳು ಇದ್ದಾರೆ. ಇವರೆಲ್ಲರೂ ಒಂದೇ ಬಾರಿ ರಿಲೀಸ್ ಆದರೆ ಮತ್ತೆ ಕ್ರೈಂಗಳು ಮರುಕಳಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.