ಕರ್ನಾಟಕದಲ್ಲಿ ಮಾತೃಭಾಷೆ ಕನ್ನಡ ಕಡ್ಡಾಯವಾಗಿದೆ. ಕನ್ನಡವನ್ನು ಎಲ್ಲ ಮಕ್ಕಳು ಮೊದಲ ವಿಷಯವಾಗಿ ತೆಗೆದುಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್ ಮಧು ಬಂಗಾರಪ್ಪ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಜಡೆ ಗ್ರಾಮದ ಶ್ರೀ ಸಿದ್ಧ ವೃಷಬೇಂದ್ರ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ 14 ವರ್ಷದೊಳಿಗಿನ ಮಕ್ಕಳ ತಾಲ್ಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡುವ ಸಂದರ್ಭದಲ್ಲಿ ಅವರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ.
ರಾಜ್ಯದಲ್ಲಿ ಮೂರು ಬೋರ್ಡ್ ಎಕ್ಸಾಂ ಮಾಡುವ ಮೂಲಕ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಕೆಲಸ ಮಾಡಲಾಗುತ್ತಿದೆ. ಇದರಿಂದ ಶಿಕ್ಷಕರಿಗೆ ಸ್ವಲ್ಪ ತೊಂದರೆ ಆಗಬಹುದು. ಆದರೆ ಸರ್ಕಾರ ಹೆಚ್ಚಿನ ಶಿಕ್ಷಕರ ನೇಮಕ ಮಾಡಿಕೊಳ್ಳುತ್ತದೆ. ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ನಾವು, ನಮ್ಮ ಸರ್ಕಾರ ಬದ್ಧವಾಗಿದೆ ಎಂದರು. ಅಷ್ಟೇ ಅಲ್ಲದೆ ಮಾತೃ ಭಾಷೆಗೆ ಹೆಚ್ಚು ಪ್ರಾಧಾನ್ಯತೆ ನೀಡಬೇಕು ಎಂಬ ವಿಚಾರವನ್ನು ಒತ್ತಿ ಹೇಳಿದ್ದಾರೆ.
ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಬೇಡಿಕೆಯೂ ಬಹಳ ಇದೆ. ಮಕ್ಕಳು ಮಾತೃಭಾಷೆ ಕನ್ನಡ ಕಡ್ಡಾಯ ಇರುವುದರಿಂದ ಅದರ ಜೊತೆಗೆ ಇಂಗ್ಲೀಷ್ ಹಾಗೂ ಬೇರೆ ಬೇರೆ ಭಾಷೆಗಳನ್ನು ಕಲಿಯಬೇಕು. ಸೊರಬ ತಾಲ್ಲೂಕಿನಲ್ಲಿಯೂ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯುತ್ತೇವೆ ಎಂಬುದಾಗಿ ಹೇಳಿದ್ದಾರೆ.
ವಲಯ ಕ್ರೀಡಾಕೂಟಗಳು ಮೊದಲು ಹೆಚ್ಚಾಗಿರಲಿಲ್ಲ. ಈಗ ಕ್ರೀಡಾಕೂಟಗಳ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿವೆ. ಕ್ರೀಡಾಕೂಟಗಳನ್ನು ಮಾಡುವುದರಿಂದ ಮಕ್ಕಳ ಅಭಿವೃದ್ಧಿಗೆ ಬುನಾದಿ ಹಾಕಿದಂತಾಗುತ್ತದೆ. ಮುಂದಿನ ದಿನಗಳಲ್ಲಿ ಕ್ರೀಡೆಗೆ ಹೆಚ್ಚು ಒತ್ತು ಕೊಡುತ್ತೇವೆ ಎಂದು ತಿಳಿಸಿದರು.